ಮೋರಟಗಿಯಲ್ಲಿ ಜಂಗಿ ನಿಕಾಲಿ ಕುಸ್ತಿ | ಪ್ರೊ.ಅರವಿಂದ ಮನಗೂಳಿ ಅಭಿಮತ
ಸಿಂದಗಿ: ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಪ್ರೊಫೆಸರ್ ಅರವಿಂದ ಮನಗೂಳಿ ಹೇಳಿದರು.
ಹಜರತ್ ಮಿಟ್ಟೆವಾಲಿ ಉರುಸು ನಿಮಿತ್ತ ಗ್ರಾಮದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಟೋಟಗಳಲ್ಲಿ ಗೆದ್ದಾಗ ಅತಿಯಾಗಿ ಹಿಗ್ಗಬಾರದು. ಸೋತಾಗ ಕುಗ್ಗಬಾರದು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬಾರದು. ಯುವ ಜನತೆ ವಿದೇಶಿ ಕ್ರೀಡೆಗಳಿಂದ ಸ್ವದೇಶಿ ಆಟಗಳನ್ನು ಹೆಚ್ಚು ಪ್ರೀತಿಸಬೇಕು ಎಂದರು.
ಕ್ರೀಡೆಗಳು ಬಾಂಧವ್ಯ ಬೆಸೆಯಲು ಸೂಕ್ತ ವೇದಿಕೆಯಾಗಿವೆ. ಹಜರತ್ ಮಿಟ್ಟೆವಾಲಿ ಜಾತ್ರೆ ಸಮಿತಿಯವರು ಕರ್ನಾಟಕ ಮತ್ತು ಮಹಾರಾಷ್ಟçದ ಪ್ರಸಿದ್ಧ ಪೈಲ್ವಾನರನ್ನು ಕರೆಸಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಹಾಗೂ ಸೋತವರಿಗೆ ಸಮಾಧಾನಕರ ಬಹುಮಾನ ನೀಡಿ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸೌಹಾರ್ದ ಮೂಡಿಸುವ ಇಂಥ ಆಟಗಳನ್ನು ಉತ್ಸವಗಳಲ್ಲಿ ನಡೆಸುತ್ತಿರುವುದು ಶ್ಲಾಘನೀಯ. ಸಿಂದಗಿ ತಾಲೂಕಿನಲ್ಲೇ ಕುಸ್ತಿ ಆಯೋಜನೆಗೆ ಮೋರಟಗಿ ಗ್ರಾಮ ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ, ಮೈಬೂಬಸಾಬ್ ಕಣ್ಣಿ, ಪ್ರಕಾಶ ಅಡಗಲ್, ರಜಾಕ್ ಬಾಗವಾನ, ಶಿವರಾಯ ಹಿಪ್ಪರಗಿ, ಅಬ್ಬಾಸಲಿ ಬಳೂರಗಿ, ಸಲೀಮ್ ಕಣ್ಣಿ, ದತ್ತಪ್ಪ ಬಳಗುಂಪಿ, ಅಬ್ಬಾಸಲಿ ಬಂಟನೂರ, ರಜಾಕಸಾಬ್ ಮುಲ್ಲಾ, ದಾವಲಸಾಬ್ ಮುಲ್ಲಾ ಹಾಗೂ ಸುತ್ತಲಿನ ಗ್ರಾಮಸ್ಥರು ಇದ್ದರು.

