ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಉಸ್ತುವಾರಿ ಶಂಕರಗೌಡ ಸೋಮನಾಳ ಎಚ್ಚರಿಕೆ
ಮುದ್ದೇಬಿಹಾಳ: ಸರ್ಕಾರಿ ಯೋಜನೆಗಳನ್ನ ಹುಡುಕಿಕೊಂಡು ರೈತರು ಬರೋ ಬದಲು, ರೈತರ ಬಳಿಗೇ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವಂತಾಗಬೇಕು ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಸಚಿವರೂ ಆದ ತಾಲೂಕು ಉಸ್ತುವಾರಿ ಶಂಕರಗೌಡ ಸೋಮನಾಳ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬರ ಆವರಿಸಿ ರೈತರಿಗೆ ಸಂಕಷ್ಟ ಎದುರಾಗಿದೆ. ಕೆಬಿಜೆಎನ್‌ಎಲ್ ನ ಅಧಿಕಾರಿಗಳು ಎಲ್ಲ ಕೆರೆಗಳನ್ನು ತುಂಬಲು ಸೂಕ್ತ ಕ್ರಮ ವಹಿಸಬೇಕು. ನೀರು ತಡೆಹಿಡಿಯಲು ಯಾರಾದರೂ ಕಾಲುವೆಗಳನ್ನು ಬಂದ್ ಮಾಡಿದ್ದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಂಡು ಯಾವುದೇ ಅಡ್ಡಿ ಇಲ್ಲದೇ ಕೆರೆಗೆ ನೀರು ತಲುಪುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ತಾಲೂಕಿನೆಲ್ಲೆಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ವಿವಿಧೆಡೆ ಅಳವಡಿಸಲಾದ ಆರ್‌ಓ ಪ್ಲಾಂಟ್ ಗಳ ಪೈಕಿ ಬಂದ್ ಆಗಿರುವ ಮತ್ತು ಚಾಲ್ತಿ ಇರುವ ಕುರಿತು ಮಾಹಿತಿ ಸಂಗ್ರಹಿಸಿ ಬಂದ್ ಆದ ಪ್ಲಾಂಟ್‌ಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲ್ಪಟ್ಟ ಬಗ್ಗೆ ಪ್ರತಿ ಪಂಚಾಯತಿಯ ಪಿಡಿಓಗಳಿಂದ ಧೃಢೀಕರಣ ಪಡೆದು ಕಡ್ಡಾಯವಾಗಿ ಖುದ್ದು ಸ್ಥಳ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಪಟ್ಟಣದ ಮುಖ್ಯ ಬಜಾರ ನಲ್ಲಿರುವ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪ್ರವೇಶವಾಗಿ ವಾತಾವರಣವನ್ನು ಹಾಳು ಮಾಡುತ್ತಿರುವ ಬಸ್ ನಿಲ್ದಾಣದಲ್ಲಿನ ಶೌಚಾಲಯದ ಮಲಿನವನ್ನು ಶಾಲೆಯ ಆವರಣದಲ್ಲಿ ಪ್ರವೇಶಿಸದಂತೆ ಸೂಕ್ತ ಕ್ರಮವಹಿಸಲು ಪುರಸಭೆ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ, ಗ್ರಹಲಕ್ಷ್ಮಿ ಯೋಜನೆಯಡಿ ಸಹಾಯ ಕೋರಿ ಬರುವ ಸಾರ್ವಜನಿಕರಿಗೆ ಸಹಕರಿಸುವಂತೆ ಸಿಡಿಪಿಓ ಸಿಬ್ಬಂದಿಗೆ, ತಾಲೂಕು ಆಸ್ಪತ್ರೆಯನ್ನು ಇನ್ನಷ್ಟು ಶುಚಿಯಾಗಿಟ್ಟುಕೊಳ್ಳುವಂತೆ ತಾಲೂಕು ಆರೋಗ್ಯ ಆಡಳಿತಾಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಟ್ಯೂಷನ್ ನ ವ್ಯವಸ್ಥೆ ಸೇರಿದಂತೆ ಗುಣಮಟ್ಟದ ಅಹಾರ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಇಲಾಖೆಯ ಅಧಿಕಾರಿಗೆ, ಕೃಷಿ ಸಂಬಂಧಿತ ಯೋಜನೆಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂತೆ ಕೃಷಿ ಅಧಿಕಾರಿಗಳಿಗೆ ಹೀಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಕಚೇರಿ ಸಂಬಂಧಿತ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡು ಹೋಗುವಂತೆ ಮತ್ತು ಅನಿರೀಕ್ಷಿತ ಭೇಟಿ ನೀಡುವದಾಗಿ ತಿಳಿಸಿದರು.
ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಾದ ಸಿ.ಎಸ್.ರಾಠೋಡ, ಶಿವರಾಜ ನಾಯಕ, ವಿಜಯಕುಮಾರ ಉತ್ನಾಳ, ರಾಘವೇಂದ್ರ ದೇಶಪಾಂಡೆ, ಶಿವಾಜಿ ಬಿರಾದಾರ, ಎ.ಎಸ್.ಮದಭಾವಿ, ಶಿವಾನಂದ ಮೇಟಿ, ಸತೀಶ ತಿವಾರಿ, ಆರ್.ಕೆ.ರಾಠೋಡ, ಕೆ.ಎಂ.ಬಿದರಕುಂದಿ, ಎಸ್.ಬಿ.ಹೊಲ್ದೂರ, ಮಲ್ಲಿಕಾರ್ಜುನ ಹಗಲಿ, ಆಯ್.ಬಿ.ಬಾಗಾಯತ, ರವಿ ಅಗಸರ, ಎಸ್.ಕೆ.ಲಮಾಣಿ, ಮಹಾಂತೇಶ ಕಟ್ಟಿಮನಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಸಭೆಗೂ ಮೊದಲು ತಾಲೂಕಿನ ಲೇಬಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತಾಲೂಕು ಸರ್ಕಾರಿ ಆಸ್ಪತ್ರೆ, ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಘಟಕ, ಜಟ್ಟಗಿ ಗ್ರಾಮದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಕೆ.ಇ.ಬಿ ಗೆ ಭೇಟಿ ನೀಡಿ ಪರಿಶೀಲಿಸಿದರು.

