ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಿ, ಅವುಗಳ ಮೂಲಕ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ರಾಮಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ಹಲಗೆ ವಾದನ ಮೂಲಕ ಮೆರವಣಿಗೆ ನಡೆಸಿ ನೀರು ಹರಿಸಲು ಆಗ್ರಹಿಸಿದರು.
ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿದ ರೈತ ಸಂಘದ ಕಾರ್ಯಕರ್ತರು ಕೆಬಿಜೆಎನ್ ಎಲ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಅಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ, ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಮಾತನಾಡಿ, ಬಿಸಲಿನ ಪ್ರಖರತೆ ಹೆಚ್ಚಿದ್ದು, ಜಲಾಶಯದಲ್ಲಿಯೂ ನೀರಿನ ಸಂಗ್ರಹ ಸಾಕಷ್ಟಿದೆ. ಕೆರೆಗಳು ಸಂಪೂರ್ಣ ಒಣಗಿವೆ, ಅಂತರ್ಜಲ ಮಟ್ಟವೂ ಕುಸಿದಿದೆ. ತಕ್ಷಣವೇ ಕಾಲುವೆಗೆ ನೀರು ಹರಿಸಬೇಕು, ಅದರ ಮೂಲಕ ಜಿಲ್ಲೆಯ ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬರುವ ಕೆರೆಗಳನ್ನು ತುಂಬಿಸಲು 1.8 ಟಿಎಂಸಿ ಅಡಿ ನೀರನ್ನು ಫೆ. 19 ರಿಂದ ಮಾರ್ಚ್ 10 ರವರೆಗೆ ಬಳಸಿಕೊಳ್ಳಲು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಾಬಣ್ಣ ಅಂಗಡಿ, ರವಿ ಕೋತಿನ, ಪೀರಸಾಬ್ ನದಾಫ್, ವೆಂಕಟೇಶ ವಡ್ಡರ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

