’ವ್ಯಕ್ತಿ – ವ್ಯಕ್ತಿತ್ವ’ ಅಂಕಣ ಬರಹ
ವಿಜಯ ಕರ್ನಾಟಕ” ಪತ್ರಿಕೆಯ “ಹೆಲ್ತ್ ಎಕ್ಸಲೆನ್ಸ್ 2024” ಪ್ರಶಸ್ತಿ ಪುರಸ್ಕೃತ

ಇವರು ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಮಾಜ ಸೇವಕರು. ಅದಕ್ಕಾಗಿ ಆರಿಸಿಕೊಂಡ ಮಾರ್ಗ ರಾಜಕಾರಣ. ರಾಜಕಾರಣಕ್ಕೆ ಬರುವವರು ಹಣ ಮಾಡಲು ಎಂಬ ಅಪವಾದಕ್ಕೆ ವಿರುದ್ಧವಾಗಿ ತಾವು ಕಷ್ಟಪಟ್ಟು ದುಡಿದ ಅಪಾರ ಹಣವನ್ನು ಸಮಾಜಸೇವೆಗೆ ಸುರಿದವರಿವರು. ಇಂತಹ ಅಪರೂಪದ ವ್ಯಕ್ತಿತ್ವ ಹೊಂದಿದವರು ಡಾ.ಗೌತಮ್ ಆರ್ ಚೌಧರಿ ಅವರು.
“ವೈದ್ಯೋ ನಾರಾಯಣ ಹರಿ” ಉಕ್ತಿಗೆ ಬದಲು ಬಡ ರೋಗಿಗಳಲ್ಲೇ ದೇವರನ್ನು ಕಾಣುವ ಸಹೃದಯಿ ಇವರು. ವಿಜಯಪುರ ಜಿಲ್ಲೆಯ ಕಡುಬಡತನದ ಅನೇಕ ರೋಗಿಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ಬೆಂಗಳೂರಿಗೆ ಕರೆದೊಯ್ದು ಅವರಿಗೆ ಅಗತ್ಯವಿದ್ದ ಲಕ್ಷಾಂತರ ರೂ. ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಿ ಆ ಕುಟುಂಬಗಳ ಬಾಳಿಗೆ ಬೆಳಕಾದ ಇವರು ಪ್ರಚಾರದಿಂದ ಗಾವುದ ದೂರವಿರುವವರು. ವೈದ್ಯಕೀಯ ರಂಗದಲ್ಲಿ ಇವರ ಇಂತಹ ಸಮರ್ಪಣಾ ಭಾವದ ಸೇವೆಯನ್ನು ಗುರುತಿಸಿಯೇ ಇತ್ತೀಚೆಗೆ ನಾಡಿನ ಖ್ಯಾತ ದಿನಪತ್ರಿಕೆ “ವಿಜಯ ಕರ್ನಾಟಕ” ಪತ್ರಿಕೆ ಬಳಗವು ಇತ್ತೀಚೆಗೆ ಇವರಿಗೆ ಬೆಂಗಳೂರಿನಲ್ಲಿ “ಹೆಲ್ತ್ ಎಕ್ಸಲೆನ್ಸ್ 2024” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.
ಮೂಲತಃ ಸಿಂದಗಿ ತಾಲೂಕಿನವರಾದ ಇವರು ಜನಿಸಿದ್ದು ವಿಜಯಪುರದ ರಾಜಕಾರಣ ಹಿನ್ನೆಲೆಯ ಪ್ರತಿಷ್ಠಿತ ಚೌಧರಿ ಮನೆತನದಲ್ಲಿ. ಹೀಗಾಗಿ ಸಹಜವಾಗಿಯೇ ಇವರಿಗೆ ದೀನದಲಿತರೆಂದರೆ ಕಾಳಜಿ ಮಾಡುವ ಸ್ವಭಾವ ರಕ್ತದಲ್ಲೇ ಇತ್ತು. ಜೊತೆಗೆ ಓದಿದ್ದು, ವೃತ್ತಿಯಾಗಿ ಕೈಗೊ೦ಡಿದ್ದು ವೈದ್ಯಕೀಯವನ್ನು. ಇದು ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ಮಾತನ್ನು ಅಕ್ಷರಶಃ ಜೀವನದ ಧ್ಯೇಯವಾಗಿಸಲು ಶಕ್ತಿ ನೀಡಿತು. ಸೇವಾ ಮನೋಭಾವದ ರಾಜಕಾರಣಿಯಲ್ಲಿ ವೈದ್ಯಕೀಯ ಪ್ರಾವೀಣ್ಯ ಮೇಳೈಸಿರುವ ಅಪರೂಪದ ಉದಾಹರಣೆ ಇವರ ವ್ಯಕ್ತಿತ್ವ. ಆದ್ದರಿಂದ ಜನರಿಗೆ ಇವರೆಂದರೆ ಸಹಜ ಗೌರವ.
ಡಾ.ಗೌತಮ್ ಆರ್.ಚೌಧರಿ ಅವರಿಗೆ ಸದಾ ಸಮಾಜದ ಸ್ವಾಸ್ಥ್ಯದ ಮೇಲೆ ಕಾಳಜಿ. ಹೀಗಾಗಿಯೇ ತಮ್ಮ ಬಳಿ ಬರುವ ರೋಗಿಗಳ ಆ ಕ್ಷಣದ ಕಾಯಿಲೆಗೆ ಚಿಕಿತ್ಸೆ ಕೊಡುವುದಷ್ಟೇ ಅವರ ಗುರಿ ಅಲ್ಲ, ದೀರ್ಘಕಾಲಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಸಲಹೆಗಳನ್ನೂ ನೀಡುತ್ತಾರೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗಂತೂ ಅವರದು ಉಚಿತ ಚಿಕಿತ್ಸೆಯ ಔದಾರ್ಯ. ವೃತ್ತಿ ಹಾಗೂ ಸಾಮಾಜಿಕವಾಗಿ ಸರಳ – ಸಜ್ಜನಿಕೆಯಿಂದ, ಸಂಯಮದಿಂದ ವರ್ತಿಸುವ ಅವರ ವ್ಯಕ್ತಿತ್ವ ಅವರಿಗೆ ಜನರ ಅಭಿಮಾನವನ್ನೂ ತಂದುಕೊಟ್ಟಿದೆ, ಅವರ ಏಳಿಗೆಗೂ ಕಾರಣವಾಗಿದೆ.
ವ್ಯಕ್ತಿಗಳ ಆರೋಗ್ಯಕ್ಕೆ ವೆಂಕಟೇಶ್ವರ ಕ್ಲಿನಿಕ್
ಡಾ.ಗೌತಮ್ ಆರ್.ಚೌಧರಿ ಅವರು 1995ರಲ್ಲಿ ಬೆಂಗಳೂರಿನ ಅವಲಹಳ್ಳಿಯಲ್ಲಿ ವೆಂಕಟೇಶ್ವರ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಬಳಿಕ ಸುಧಾರಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳುಳ್ಳ ಪಲ್ಸ್ ಆಸ್ಪತ್ರೆಯನ್ನು ಸ್ಥಾಪಿಸಿದರು. ಇದು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಅವರ ಬದ್ಧತೆಯ ದ್ಯೋತಕ. ಆದರೆ, ತಮ್ಮ ತಂದೆ ಮಾಜಿ ಸಚಿವ ಆರ್.ಬಿ.ಚೌಧರಿ ಅವರ ಅಕಾಲಿಕ ನಿಧನದಿಂದಾಗಿ ಅವರು ಪಲ್ಸ್ ಆಸತ್ರೆಯ ಚುಕ್ಕಾಣಿಯನ್ನು ಬಿಟ್ಟು ಹೊರಬರಬೇಕಾಯಿತು. ಆದರೂ, ಜನರ ಕಡೆಗೆ ಅವರ ತುಡಿತ ನಿಂತಿಲ್ಲ. ಹತ್ತಾರು ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ದೀನದಲಿತರಿಗೆ
ಉಚಿತ ಶಸ್ತ್ರಚಿಕಿತ್ಸೆಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವುದನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ತಮ್ಮ ತಂದೆಯವರ ನೆನಪಿಗಾಗಿ ಅವರು ಸ್ಥಾಪಿಸಿದ ಆರ್.ಬಿ.ಚೌಧರಿ ಸ್ಮಾರಕ ಟ್ರಸ್ಟ್ ಮೂಲಕ ಬಡ ಜನರಿಗೆ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿದ್ದಾರೆ. ಮಹಾರಾಷ್ಚ್ರದ ಲಾತೂರ ದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಸಂತ್ರಸ್ತರಿಗೆ ಸಹಾಯ ಮಾಡುವುದರಿಂದ ಹಿಡಿದು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮುಂಚೂಣಿ ಕಾರ್ಯಕರ್ತರಾಗುವವರೆಗೆ ಅವರು ಸಮರ್ಪಣೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಂತೂ ದಿನಕ್ಕೆ 20 ಗಂಟೆಗಳನ್ನೂ ರೋಗಿಗಳಿಗಾಗಿಯೇ ಮೀಸಲಿಟ್ಟ ಅವರ ಬದ್ಧತೆ ಗಮನಾರ್ಹ.
ಸಮಾಜದ ಆರೋಗ್ಯಕ್ಕೆ ರಾಜಕೀಯ
ರಾಜಕಾರಣ ಡಾ.ಗೌತಮ್ ಆರ್.ಚೌಧರಿಯವರಿಗೆ ಹೊಸದಲ್ಲ, ವಿಜಯಪುರದ ಅತ್ಯಂತ ಗೌರವಾನ್ವಿತ ಚೌಧರಿ ಕುಟುಂಬದಿಂದ ಬಂದ ಮೂರನೇ ತಲೆಮಾರಿನ ರಾಜಕಾರಣಿ ಅವರು, ಡಾ.ಗೌತಮ್ ಆರ್. ಚೌಧರಿ ಅವರ ತಂದೆ ಡಾ.ಆರ್.ಬಿ.ಚೌಧರಿ ಅವರು ಈ ಹಿಂದೆ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ದೊಡ್ಡಪ್ಪ ಅವರ ಕೆ.ಬಿ.ಚೌಧರಿ ಲೋಕಸಭೆಯ ಸದಸ್ಯರಾಗಿದ್ದರು. ಅವರ ಅಜ್ಜ ಭೀಮಣ್ಣ ಚೌಧರಿ ಬಿಜಾಪುರದ ಹತ್ತಿ ರಾಜ ಎಂದೇ ಹೆಸರಾಗಿದ್ದರು.
ಪಾರಂಪರಿಕವಾಗಿ ಬಂದ ಈ ಸಮಾಜ ಸೇವೆಯ ಸೆಳೆತ ಡಾ.ಗೌತಮ್ ಆರ್. ಚೌಧರಿಯವರಿಗೂ
ಬಂತು. ಸಹಜವಾಗಿಯೇ ಅವರು ಜನಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಆದರ್ಶಗಳು ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರ ದೃಷ್ಟಿಕೋನ ದಿಂದ ಆಕರ್ಷಿತರಾದ ಅವರು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಸೇರಿದರು. ಅದಕ್ಕೂ ಮುನ್ನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಅವರು ದೀರ್ಘಕಾಲ ಗುರುತಿಸಿಕೊಂಡಿದ್ದರು. ಕೆಪಿಸಿಸಿ ರಾಜ್ಯ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಪ್ರಚಾರ ಸಮಿತಿಯ ಸದಸ್ಯರಾಗಿ ಮತ್ತು ಎಐಸಿಸಿ ಮೀನುಗಾರರ ಘಟಕದ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು.
“ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಹಿರಿಯ ಬಿಜೆಪಿ ನಾಯಕರ ಆದರ್ಶಗಳಿಂದ ಆಕರ್ಷಿತನಾಗಿ 2018ರ ವಿಧಾನಸಭಾ ಚುನಾವಣೆಯ ವೇಳೆಗೆ ಬಿಜೆಪಿ ಸೇರಿದೆ. ಆ ಬಳಿಕ ಪಕ್ಷದ ಎಲ್ಲಾ ಚಟುವಟಿಕೆಗಳು ಮತ್ತು ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ” ಎನ್ನುತ್ತಾರೆ ಡಾ.ಗೌತಮ್ ಆರ್.ಚೌಧರಿ.
*ಪ್ರಶಸ್ತಿ ಮತ್ತು ಸಾಧನೆ*
- “ವಿಜಯ ಕರ್ನಾಟಕ” ಪತ್ರಿಕೆ ಕೊಡಮಾಡುವ “ಹೆಲ್ತ್ ಎಕ್ಸಲೆನ್ಸ್ 2024” ಪ್ರಶಸ್ತಿ
- 2004ರ ಸಾಲಿನ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- ಸತತ 100 ಗಂಟೆಗಳ ಕಾಲ ನಡೆದ
‘ರಂಗ ಶತಕ’ ನಾಟಕ ಕಾರ್ಯಕ್ರಮಕ್ಕೆ ಉಚಿತ ವೈದ್ಯಕೀಯ ನೆರವು ನೀಡುವ ಮೂಲಕ ಲಿಮ್ಮಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅವರು ಸ್ಥಾನ ಪಡೆದಿದ್ದಾರೆ. - ಹಲವಾರು ಮಠ-ಮಾನ್ಯಗಳು ಮತ್ತು ಸಂಘ ಸಂಸ್ಥೆಗಳ ಪ್ರಶಸ್ತಿ – ಗೌರವ.
ಕುಟುಂಬ ಮತ್ತು ಶಿಕ್ಷಣ
ವಿಜಯಪುರದಲ್ಲಿ ಹುಟ್ಟಿ ಬೆಳೆದ ಡಾ.ಗೌತಮ್ ಆರ್.ಚೌಧರಿ ಅವರು ಮುದ್ದೇಬಿಹಾಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪಡೆದ ನಂತರ ವಿಜಯಪುರದ ಆಲ್-ಅಮೀನ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು. ಜಯದೇವ ಇನ್ ಸ್ಟಿಟ್ಯೂಟ್‌ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ವೈದ್ಯ ಅಭ್ಯಾಸವನ್ನು ಪ್ರಾರಂಭಿಸಿದರು. ನಂತರ ಅವರು ಇಗ್ನೋ ಮೂಲಕ ಗೋವಾ ವೈದ್ಯಕೀಯ ಕಾಲೇಜಿನಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

“ನಾನು ಜನಕೇಂದ್ರಿತ ಮತ್ತು ಅಭಿವೃದ್ಧಿ ಆಧರಿತ ರಾಜಕೀಯ ಮಾಡಲು ಬಯಸುತ್ತೇನೆ. ಒಂದು
ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ಯಶಸ್ಸಿನ ಕೀಲಿಯಾಗಿದೆ ಎಂದು ನಾನು ನಂಬುತ್ತೇನೆ. ಬಡರೋಗಿಗಳ ಸೇವೆಯಲ್ಲಿಯೇ ನನ್ನ ದಿ.ತಂದೆಯವರನ್ನು ಕಾಣುತ್ತೇನೆ.”
– ಡಾ.ಗೌತಮ್ ಆರ್.ಚೌಧರಿ
ಸಂಸ್ಥಾಪಕ, ವೆಂಕಟೇಶ್ವರ ಆರೋಗ್ಯ ಕೇಂದ್ರ

