ವಿಜಯಪುರ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ
ವಿಜಯಪುರ:ಸಮಾಜದಲ್ಲಿನ ಕಂದಾಚಾರಗಳನ್ನು ಹೊಡೆದೊಡಿಸಲು ತಮ್ಮದೆಯಾದ ಚಿಂತನೆಗಳನ್ನು ನೀಡಿದ ಸಂತ ಸೇವಾಲಾಲರು ವಾಸ್ತವಿಕ ಜಗತ್ತಿನಲ್ಲಿ ಬದುಕಿದ ದಾರ್ಶನಿಕ ವ್ಯಕ್ತಿ ಎಂದು ಉಪನ್ಯಾಸಕಿ ಅನುಪಮಾ ಪಿ. ಹೇಳಿದರು.
ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸೇವಾಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ದರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ ಕವಿತಾ, ಸಮಾಜ ಕಲ್ಯಾಣ ಇಲಾಖೆಯ ಪುಂಡಲಿಕ್ ಮಾನವರ, ಮಹನಾಗರ ಪಾಲಿಕೆಯ ಸುಮಿತ್ರ ರಾಜು ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಯ್ಯುಬ್ ದ್ರಾಕ್ಷಿ, ಮಾಜಿ ಶಾಸಕರರಾದ ಮನೋಹರ್ ಐನಾಪೂರ, ರಾಜಪಾಲ ಚವ್ವಾಣ, ಕೇಶವ ಗಂಗಾರಾಮ ರಾಠೋಡ, ಧನಸಿಂಗ ಮಾಹಾರಾಜ, ಗೋಪಾಲ ಮಹಾರಾಜ ಗುಂಡು ಮಹಾರಾಜ, ಕೆ.ಜೆ. ರಾಠೋಡ ಉಪಸ್ಥಿತರಿದ್ದರು.
ಭಾವಚಿತ್ರ ಮೆರವಣಿಗೆ: ಕಾರ್ಯಕ್ರಮದ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಕಂದಗಲ್ ಹನುಂತರಾಯ ರಂಗಮಂದಿರದವರೆಗೆ ಸಂತ ಸೇವಲಾಲ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಗೆ ತಹಶೀಲ್ದಾರ ಕವಿತಾ ಅವರು ಚಾಲನೆ ನೀಡಿದರು.
ಈ ವೇಳೆ ವಿವಿಧ ವಾದ್ಯಮೇಳ, ಗೊಂಬೆ ಮೆರವಣಿಗೆ ಹಾಗೂ ಬಂಜಾರ ಸಮುದಾಯದ ಯುವಕರು, ಹೆಣ್ಣು ಮಕ್ಕಳು ಸಾಂಪ್ರದಾಯಿಕ ಲಂಬಾಣಿ ಧಿರಿಸಿನಲ್ಲಿ ನೃತ್ಯ ಮಾಡಿದರು.

