ವಿಜಯಪುರ: ಭೂತನಾಳ ಕೆರೆಯಲ್ಲಿ ನೀರು ಖಾಲಿ ಆಗಿದ್ದರಿಂದ, ನಗರದ 5 ವಾರ್ಡ್ ಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿದ್ದ ಸಮಸ್ಯೆ ನೀಗಿಸಲು, ಭೂತನಾಳ ತಾಂಡಾ ಬಳಿ ಹಾದು ಹೋಗಿರುವ ಅಕ್ವಾಡೆಕ್ ದಿಂದ ಭೂತನಾಳ ಕೆರೆಗೆ ತಾತ್ಕಾಲಿಕವಾಗಿ ನೀರು ಹರಿಸಲು ಟ್ಯಾಪಿಂಗ್ ವ್ಯವಸ್ಥೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗಮನಸೆಳೆಯಲಾಗಿತ್ತು. ಅಲ್ಲದೆ, 2023 ಡಿ.30 ರಂದು ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆಯಲಾಗಿತ್ತು. ಇದೀಗ ಅಕ್ವಾಡೆಕ್ ದಿಂದ ಭೂತನಾಳ ಕೆರೆಗೆ ನೀರು ಹರಿಸಲು ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್. ನಂ.4, 5, 6, 10, 12 ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ.
2023 ಡಿಸೆಂಬರ್ 2 ರಿಂದ ಲಿಂಗದಳ್ಳಿ ಗ್ರಾಮದ ಬಳಿಯ ಜ್ಯಾಕ್ ವೆಲ್ ನಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟವು 515 ಮೀ.ಗೆ ಇಳಿಕೆ ಆಗಿದ್ದರಿಂದ ಕೆರೆಗಳಿಗೆ ನೀರು ತುಂಬುವ ಪಂಪುಗಳನ್ನು ಕೆಬಿಜೆಎನ್ ಎಲ್ ಇಲಾಖೆ ಸ್ಥಗಿತಗೊಳಿಸಿದೆ. ಇದರಿಂದ ಬತ್ತಿ ಹೋಗಿರುವ ಭೂತನಾಳ ಕೆರೆಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಪರ್ಯಾಯ ವ್ಯವಸ್ಥೆಯಾಗಿ ತಿಡಗುಂದಿ ಶಾಖಾ ಕಾಲುವೆಯಿಂದ ಭೂತನಾಳ ಕೆರೆ ತುಂಬಿಸಲು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ 2019 ಅಗಸ್ಟ್ 14 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು.
ಅಲ್ಲದೆ, 2020 ಅಕ್ಟೋಬರ್ 9 ರಂದು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಸಹ ಬರೆಯಲಾಗಿತ್ತು. ರೂ.7.54 ಕೋಟಿ ಮೊತ್ತದ ಈ ಯೋಜನೆಯು ಅನುಮೋದನೆ ಹಂತದಲ್ಲಿದ್ದು, ಆದಷ್ಟು ಶೀಘ್ರ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಮುಂದೆ ನೀರಿನ ಅಭಾವ ಸೃಷ್ಟಿ ಆಗುವುದಿಲ್ಲ ಎಂದು ಶಾಸಕ ಯತ್ನಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಭೂತನಾಳ ಕೆರೆಗೆ ತಾತ್ಕಾಲಿಕ ನೀರು ಹರಿಸಲು ಕ್ರಮ :ಶಾಸಕ ಯತ್ನಾಳ
Related Posts
Add A Comment

