ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮನನೊಂದು ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿದ ಯುವಕನನ್ನು ಸ್ನೇಹಿತರ ತಂಡವೊಂದು ಸಮಯಪ್ರಜ್ಞೆ ಹಾಗೂ ಸಾಹಸದಿಂದ ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದ ಯಂಕಪ್ಪ ಸಂಗಪ್ಪ ಮೂಲಿಮನಿ (28) ರಕ್ಷಣೆಗೊಳಗಾದ ಯುವಕ.
ಸ್ನೇಹಿತರ ಬಳಗವು ಬಾಗಲಕೋಟೆಯಲ್ಲಿ ಸಿನಿಮಾ ವೀಕ್ಷಿಸಿ ಕೊಲ್ಹಾರ ಸೇತುವೆ ಮಾರ್ಗವಾಗಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ, ಸೇತುವೆ ಮೇಲಿಂದ ವ್ಯಕ್ತಿಯೊಬ್ಬರು ಕೃಷ್ಣಾ ನದಿಗೆ ಹಾರುವುದನ್ನು ಗಮನಿಸಿದ್ದಾರೆ. ತಕ್ಷಣ ವಾಹನ ನಿಲ್ಲಿಸಿದ ಸ್ನೇಹಿತರು ಕ್ಷಣವೂ ತಡಮಾಡದೆ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ವಾಹನದಲ್ಲಿದ್ದ ಹಗ್ಗವನ್ನು ಬಳಸಿ ನದಿಗೆ ಇಳಿದು, ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಯುವಕನನ್ನು ಕೊಲ್ಹಾರ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸಮಯಪ್ರಜ್ಞೆ ಮೆರೆದು ಯುವಕನ ಪ್ರಾಣ ಉಳಿಸಿದ ವಿಜಯ ಬಾಟಿ, ಪ್ರಕಾಶ್ ಮಠಪತಿ, ಶ್ರೀಶೈಲ ಚೌಡಪ್ಪನವರ, ಉದಯ ಆಲಗೊಂಡಿ ಹಾಗೂ ವಿನಯ ಮಠಪತಿ ಅವರ ಸಾಹಸ ಕಾರ್ಯಕ್ಕೆ ಕೊಲ್ಹಾರ ಪೊಲೀಸ್ ಠಾಣಾಧಿಕಾರಿ ಅಶೋಕ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಸ್ನೇಹಿತರ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
