ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಾಕಿ ಕ್ರೀಡಾ ದಿಗ್ಗಜ, ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಇವರ ಸಹಯೋಗದಲ್ಲ್ಲಿ ೨೦೨೬-೨೭ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆ. ೨೮ರಂದು ಆಯೋಜಿಸಲಾಗಿದೆ.
ನಗರದ ಡಾ. ಬಿಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆ.೨೮ರಂದು ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಜಿಲ್ಲೆಯ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗಾಗಿ ವಿವಿಧ ಅಥ್ಲೆಟಿಕ್ ಹಾಗೂ ಸೈಕ್ಲಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ೧೦೦ ಮೀಟರ್, ೨೦೦ ಮೀಟರ್, ೮೦೦ ಮೀಟರ್ ಹಾಗೂ ೧೫೦೦ ಮೀಟರ್ ಓಟದ ಸ್ಪರ್ಧೆಗಳು ನಡೆಯಲಿವೆ. ಇದರೊಂದಿಗೆ ಸೈಕ್ಲಿಂಗ್ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಜಿಲ್ಲೆಯ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ:
ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಹಾಗೂ ತಂಡಗಳು ನಿಗದಿತ ಸಮಯಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವಂತೆಯೂ ಹಾಗೂ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ನ ಝೆರಾಕ್ಸ್ ಪ್ರತಿಯನ್ನು ತರಬೇಕು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುವುದು. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕ್ರೀಡಾ ಇಲಾಖೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ ೦೮೩೫೨-೨೫೧೦೮೫ ಸಂಪರ್ಕಿಸಬಹುದು ಎಂದು ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
