ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಗಾಂಧಿಚೌಕ್ ಠಾಣೆಯ ರೌಡಿ ನಿಗ್ರಹ ದಳದ ಪೊಲೀಸರು ಸುಮಾರು 12 ವರ್ಷಗಳ ಬಳಿಕ ಬಂಧಿಸಿದ್ದಾರೆ.
2009ರ ಜೂನ್ 23ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಕೃಷಿ ಅಧಿಕಾರಿ ಶಿವಪ್ಪ ತಂ. ಸಂಗಪ್ಪ ಗುಳಪ್ಪನವರ ಕೊಲೆ ಪ್ರಕರಣ ದಾಖಲಾಗಿತ್ತು. ಆರೋಪಿತರು ಮಹಿಳೆಯೊಬ್ಬರ ಸ್ನೇಹ ಬೆಳೆಸಿ, ಆಕೆಯ ಮೂಲಕ ಶಿವಪ್ಪ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಣ ಪಡೆದು, ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡ ಬಳಿಕ ಕೊಲೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹನಮಂತ ತಂ. ಪಾಂಡುರಂಗ ಭಜಂತ್ರಿ ಹಾಗೂ ಬಸವರಾಜ್ ತಂ. ಮಹಾಲಿಂಗಪ್ಪ ಪಾಟೀಲ ಅವರನ್ನು ಬಂಧಿಸಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟೆಗೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯವು ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಶಿಕ್ಷೆ ಅನುಭವಿಸುತ್ತಿದ್ದ ಬಸವರಾಜ್ ಪಾಟೀಲ 2014ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ, ಆಗಸ್ಟ್ 29ರಂದು ಬೆಳಿಗ್ಗೆ ಸುಮಾರು 11.30ಕ್ಕೆ ಕಾವಲಿದ್ದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 259/2014, ಕಲಂ 224 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.
ನಂತರ ನ್ಯಾಯಾಲಯವು ಬಸವರಾಜ್ ಪಾಟೀಲನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನ ಪತ್ತೆ ಕಾರ್ಯವನ್ನು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಆದ್ಯತೆಯಾಗಿ ಕೈಗೊಂಡಿತ್ತು.
ಗಾಂಧಿಚೌಕ್ ಠಾಣೆಯ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಠಾಣೆಯ ಪಿಐ ಪ್ರದೀಪ ತಳಕೇರಿ ಅವರ ನೇತೃತ್ವದಲ್ಲಿ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.
ಈ ವೇಳೆ ಬಸವರಾಜ್ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಿದ್ದಸಮುದ್ರ ಗ್ರಾಮದಲ್ಲಿ ರಾಜು ಪೋತದಾರ ಎಂಬುವವರ ಜಮೀನನ್ನು ಲೀಸ್‌ಗೆ ಪಡೆದುಕೊಂಡು ವಾಸವಾಗಿರುವ ಮಾಹಿತಿ ಲಭಿಸಿತು.
ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಗಸ್ಟ್ 25ರಂದು ಬಸವರಾಜ್ ಪಾಟೀಲನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಸ್ಪಿ ನಿಂಬರಗಿ ಅಭಿನಂದನೆ
ಆರೋಪಿಯನ್ನು ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಗಾಂಧಿಚೌಕ್ ಠಾಣೆಯ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಲಕ್ಷ್ಮಣ ನಿಂಬರಗಿ, ಐಪಿಎಸ್ ಶ್ಲಾಘಿಸಿದ್ದಾರೆ.

