ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾಲದ ಹಣಕ್ಕೆ ನೀಡಿದ್ದ ಚೆಕ್, ಬೌನ್ಸ್ ಆದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರು ಮಹತ್ವದ ತೀರ್ಪು ನೀಡಿದ್ದಾರೆ.
ತಾಳಿಕೋಟೆ ನಿವಾಸಿ ರವಿಚಂದ್ರ ಬಿರಾದಾರ ಅವರ ಪರವಾಗಿ ಎನ್.ಜಿ.ಕುಲಕರ್ಣಿ ವಕೀಲರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಂಗಮೇಶ್ ಅಲಿಯಾಸ್ ಸಂಗು ದೇಸಾಯಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿತು.
ದೂರಿನ ಪ್ರಕಾರ, ಆರೋಪಿ ೨೦೧೮ರಲ್ಲಿ ₹೨ ಲಕ್ಷ ಕೈ ಸಾಲ ಪಡೆದು, ಅದರ ಮರುಪಾವತಿಗಾಗಿ ನೀಡಿದ್ದ ಚೆಕ್ ಬ್ಯಾಂಕ್‌ನಲ್ಲಿ “ಈuಟಿಜs Iಟಿsuಜಿಜಿiಛಿieಟಿಣ” ಕಾರಣದಿಂದ ಅಮಾನ್ಯಗೊಂಡಿತ್ತು. ಬಳಿಕ ಕಾನೂನು ನೋಟಿಸ್ ನೀಡಿದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಂತಿಮವಾಗಿ, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಕಲಂ ೧೩೮ರಡಿ ಆರೋಪಿಯನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ, ₹೨,೧೦,೦೦೦ ದಂಡ ವಿಧಿಸಿದೆ. ಅದರಲ್ಲಿ ₹೫,೦೦೦ ಸರ್ಕಾರಕ್ಕೆ ದಂಡವಾಗಿ ಹಾಗೂ ಉಳಿದ ₹೨,೦೫,೦೦೦ನ್ನು ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. ದಂಡ ಪಾವತಿಸಲು ವಿಫಲವಾದರೆ ೬ ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ.

