ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಧಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಕಲಬುರ್ಗಿ: ಒಂದು ಕಡೆ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸರ್ಕಾರ, ಮತ್ತು ಜನಪ್ರತಿನಿಧಿಗಳು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ, ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಳೆದ ಎರಡು ದಶಕದ ಹೊಸ್ತಿಲಲ್ಲಿ 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲೇ ಶಿಕ್ಷಣ ನೀಡುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ,
10 ವರ್ಷಗಳಿಂದ ಧೂಳು ತಿನ್ನುತ್ತಿರುವ ಕಂಪ್ಯೂಟರ್‌ಗಳು ಬೆಳಕು ಕಾಣದೆ ನರಳುತ್ತಿವೆ,
ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಡಾ. ಅಜಯ್ ಧರ್ಮಸಿಂಗ್ ಅವರು ಮೂರು ಬಾರಿ ಶಾಸಕರಾಗಿ, ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಹಾಗೂ ಇದೀಗ ಸಚಿವರಾಗಿದ್ದರೂ, ತಮ್ಮದೇ ಕ್ಷೇತ್ರದ ಈ ಸರ್ಕಾರಿ ಶಾಲೆಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಶಾಲೆಗೆ ಸುಮಾರು 10 ವರ್ಷಗಳ ಹಿಂದೆ ಕಂಪ್ಯೂಟರ್‌ಗಳನ್ನು ನೀಡಲಾಗಿತ್ತು. ಆದರೆ ವಿದ್ಯುತ್ ಸಂಪರ್ಕವೇ ಇಲ್ಲದ ಕಾರಣ ಅವು ಇಂದಿಗೂ ಬಳಕೆಯಾಗದೆ ಧೂಳು ಹಿಡಿದು ಬಿದ್ದಿವೆ. ಡಿಜಿಟಲ್ ಶಿಕ್ಷಣದ ಯುಗದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಬಳಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ, ಡಿಜಿಟಲ್ ಕಲಿಕೆ ಹಾಗೂ ಮೂಲಭೂತ ಸೌಲಭ್ಯಗಳ ಭರವಸೆ ನೀಡುವ ಸರ್ಕಾರದ ಮಾತುಗಳು ಪ್ರಚಾರಕ್ಕೆ ಸೀಮಿತವಾಗಿ, ನೆಲಮಟ್ಟದಲ್ಲಿ ಜಾರಿಗೆ ಬರದೇ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಕಡತ ಮತ್ತು ವರದಿಗಳಲ್ಲೇ ಅಡಕವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಖಾಸಗಿ ಶಾಲೆಗಳಿಗೆ ಸಿಗುವ ಸೌಲಭ್ಯಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಯಾಕೆ ಸಿಗಬಾರದು?
ಬಡ ಮಕ್ಕಳ ಶಿಕ್ಷಣದ ಬಗ್ಗೆ ಆಡಳಿತಕ್ಕೆ ಕಾಳಜಿ ಇದೆಯೇ?” ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಎತ್ತಿದ್ದಾರೆ.
19 ವರ್ಷಗಳಿಂದ ಒಂದೇ ಒಂದು ಸಮಸ್ಯೆ ಬಗೆಹರಿಯದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಎಷ್ಟು ಬಾರಿ ಪರಿಶೀಲನೆ ನಡೆಸಿದರು? ಜನಪ್ರತಿನಿಧಿಗಳು ಎಷ್ಟು ಬಾರಿ ಈ ಶಾಲೆಗೆ ಭೇಟಿ ನೀಡಿದರು? ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸ್ಥಿತಿಯನ್ನು ಗಮನಿಸಲೇ ಇಲ್ಲವೇ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಕಡಕೋಳ ಶಾಲೆಯ ಕತ್ತಲೆ ಕೇವಲ ವಿದ್ಯುತ್ ಕೊರತೆಯ ಸಂಕೇತವಲ್ಲ; ಅದು ಸರ್ಕಾರಿ ಶಿಕ್ಷಣದ ಮೇಲಿನ ನಿರ್ಲಕ್ಷ್ಯದ ಸಂಕೇತವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು, ಶಾಲೆಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಿ, ಕಂಪ್ಯೂಟರ್‌ಗಳನ್ನು ಕಾರ್ಯಾರಂಭಗೊಳಿಸಿ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

