ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಮತ್ತು ಅರೆಸರ್ಕಾರಿ ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ವರ್ಷ ಜನವರಿ ೨೬ರ ಗಣರಾಜ್ಯೋತ್ಸವ ಹಾಗೂ ಆಗಸ್ಟ್ ೧೫ರ ಸ್ವಾತಂತ್ರ‍್ಯ ದಿನಾಚರಣೆ ವೇಳೆ ವೀರಯೋಧ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಇರಿಸಿ ಗೌರವ ಸಲ್ಲಿಸುವಂತೆ ಅಧಿಕೃತ ಆದೇಶ ಹೊರಡಿಸಬೇಕು ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ಸಿಂದಗಿ ತಾಲ್ಲೂಕು ಘಟಕವು ಸಿಂದಗಿ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ತಾಲೂಕಾಧ್ಯಕ್ಷ ಮಾಳು ಗುಬ್ಬೇವಾಡ ಮಾತನಾಡಿ, ಹಿಂದಿನ ಸರ್ಕಾರವು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಸಂಗೊಳ್ಳಿ ರಾಯಣ್ಣ ಅವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿತ್ತು. ಅದೇ ಮಾದರಿಯಲ್ಲಿ ಈ ಆದೇಶವನ್ನು ಗ್ರಾಮೀಣ ಮಟ್ಟ, ತಾಲೂಕು ಹಾಗೂ ಜಿಲ್ಲೆಗಳ ಎಲ್ಲ ಸರ್ಕಾರಿ ಮತ್ತು ಅರೆಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿಗಳಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಸಿದ್ದು ಕಾಚಾಪುರ, ನಿಂಗಪ್ಪ ಪೂಜಾರಿ, ಅಮೋಘಸಿದ್ಧ ಬೊಮ್ಮನಜೋಗಿ, ಸುನಿಲಕುಮಾರ ಕಾಮನಕೇರಿ, ಗಂಗಪ್ಪ ಪೂಜಾರಿ, ರೇವಣಸಿದ್ಧ ಠಣಕೇದಾರ, ಮಾಳಪ್ಪ ಪೂಜಾರಿ, ರಾಜು ಕಾಚಾಪುರ ಸೇರಿದಂತೆ ಇತರರು ಇದ್ದರು.

