ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಲ್ಲ ಅಧಿಕಾರಿಗಳು ತಮ್ಮ ಕಛೇರಿಯಲ್ಲಿ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ಸೂಚಿಸಿದರು ಎಂದು ತಾಲೂಕು ದಂಡಾಧಿಕಾರಿ ಕರೇಪ್ಪ ಬೆಳ್ಳಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಸಿಂದಗಿ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ.೧೫ರಂದು ಆಚರಿಸಲ್ಪಡುವ ಸ್ವಾತಂತ್ರೋತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಅಂದು ಬೆಳಗ್ಗೆ ೭.೪೫ರೊಳಗೆ ಎಲ್ಲ ಸರ್ಕಾರಿ, ಅರೇ ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಸಬೇಕು. ಬಳಿಕ ೮ಗಂಟೆಗೆ ತಹಶೀಲ್ದಾರ್ ಕಛೇರಿ ಆವರಣಕ್ಕೆ ಆಗಮಿಸಬೇಕು. ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ ಸರಿಯಾಗಿ ೯ಗಂಟೆಗೆ ಆರಂಭವಾಗುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಆಯಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಹಂಚಿಕೆಯAತೆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಾರ್ಯಕ್ರಮಕ್ಕೆ ತಾಲೂಕಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಿದ ಅತ್ಯತ್ತಮ ಬಿಎಲ್‌ಓ ಮತ್ತು ಮೇಲ್ವಿಚಾರಕರಿಗೆ, ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ವಿವಿಧ ತಂಡಗಳ ರಚನೆ: ಕ್ರೀಡಾಂಗಣದ ವ್ಯವಸ್ಥೆ, ವೇದಿಕೆ ಮತ್ತು ಕಾರ್ಯಕ್ರಮ ನಿರ್ವಹಣೆ, ಪಥ ಸಂಚಲನ ಹಾಗೂ ಧ್ವಜದ ವ್ಯವಸ್ಥೆ, ಆರೋಗ್ಯ ಮತ್ತು ಮುಂಜಾಗ್ರತಾ ಕ್ರಮಗಳು, ಸ್ವಚ್ಛತೆ, ಕಾವಯತ್, ಎಲ್ಲ ವೃತ್ತಗಳಿಗೂ ದೀಪಾಲಂಕಾರ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರಿಗೆ ವಿತರಿಸಬೇಕು. ಯಾವುದೇ ಲೋಪದೋಷ ಆಗದಂತೆ ಕಾರ್ಯಕ್ರಮ ನಡೆಯುವಂತಾಗಬೇಕು. ಸರಕಾರಿ ಶಾಲೆಯ ಮಕ್ಕಳು, ಅನುದಾನ ರಹಿತ, ಅನುದಾನಿತ ಶಾಲಾ ಮಕ್ಕಳಿಂದ ಬ್ಯಾಂಡ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಲಘು ಉಪಹಾರ, ಆರೋಗ್ಯ, ಅಗ್ನಿಶಾಮಕ ಇಲಾಖೆಯಿಂದ ತುರ್ತು ಸೇವೆ ಸಿದ್ಧತೆ ಸೇರಿದಂತೆ ಹಲವಾರು ವಿಷಯಗಳ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ರವಿ ಸಿರಗುಪ್ಪ, ಕಿರಣ ಹಂಪಿಹೊಳಿ, ಎಸ್.ಡಿ.ಕುಲಕರ್ಣಿ, ರಮೇಶ ಬಿರಾದಾರ, ಚೇತನ ಭಾಸಗಿ, ಆಯ್.ಎಂ.ಚಟ್ಟರಕಿ ಸೇರಿದಂತೆೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

