ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): “ಸಂಶೋಧನೆ ಎಂದರೆ ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ಸತ್ಯದ ಅನ್ವೇಷಣೆಯ ಮೂಲಕ ಸಮಾಜಕ್ಕೆ ಹೊಸ ಜ್ಞಾನವನ್ನು ನೀಡುವ ಸೃಜನಾತ್ಮಕ ಪ್ರಕ್ರಿಯೆ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹೇಶ ಚಿಂತಾಮಣಿ ಅಭಿಪ್ರಾಯಪಟ್ಟರು.
ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಆಯೋಜಿಸಿದ್ದ “ಕನ್ನಡ ಸಂಶೋಧನೆಯ ವಿಧಿ-ವಿಧಾನಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಸಂಶೋಧನೆ ಮಾನವನ ಸಹಜ ಪ್ರವೃತ್ತಿ. ಸತ್ಯದ ಅನ್ವೇಷಣೆಯೇ ಸಂಶೋಧನೆಯ ಮೂಲ ಆಶಯ. ಸಂಶೋಧನೆಯ ಶಕ್ತಿಯಿಂದಲೇ ಇಂದು ಮನುಷ್ಯ ಮಂಗಳ ಗ್ರಹದ ಅಂಗಳದವರೆಗೂ ತನ್ನ ಹೆಜ್ಜೆ ಇಟ್ಟಿದ್ದಾನೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಸಂಶೋಧನೆಯಿಂದ ಅನೇಕ ಅಪರೂಪದ ಕೃತಿಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳು ಆಸಕ್ತಿ, ಅವಧಾನ, ಪರಿಶ್ರಮ ಮತ್ತು ತ್ಯಾಗದ ಮನೋಭಾವದಿಂದ ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟಾಗ ಮಾತ್ರ ಹೊಸ ಸಾಧ್ಯತೆಗಳು ಅನಾವರಣಗೊಳ್ಳುತ್ತವೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುನಂದಾ ಎಸ್. ಶಿರೂರ ಮಾತನಾಡಿ, “ರಾಷ್ಟ್ರೀಯ ಶಿಕ್ಷಣ ನೀತಿಯು ಸಂಶೋಧನೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಸಾಕಷ್ಟು ಅವಕಾಶಗಳಿದ್ದರೂ ವಿದ್ಯಾರ್ಥಿಗಳು ಗುಣಮಟ್ಟದ ಸಂಶೋಧನೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ಓದಿನ ವ್ಯಾಪ್ತಿ ಹೆಚ್ಚಿದಾಗ, ವಿಮರ್ಶಾತ್ಮಕ ಹಾಗೂ ಚಿಕಿತ್ಸಕ ಚಿಂತನೆ ಬೆಳೆದಾಗ ಮಾತ್ರ ಸಮಾಜಮುಖಿ ಮತ್ತು ಮೌಲಿಕ ಸಂಶೋಧನಾ ಕೃತಿಗಳು ರೂಪುಗೊಳ್ಳುತ್ತವೆ” ಎಂದು ತಿಳಿಸಿದರು.
ಕನ್ನಡ ವಿಭಾಗದ ಸಂಯೋಜಕರಾದ ಡಾ. ವಾಯ್. ವಾಯ್. ಕೊಕ್ಕನವರ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕು. ಲಕ್ಷ್ಮೀ ಖವಾಸಿ ಹಾಗೂ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಭಾಗ್ಯಶ್ರೀ ಮುಗಳಖೋಡ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಸುಮ. ವೈ.ಎನ್. ವಂದಿಸಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ಬಂದೇನಮಾಜ್ ಕೊರಬು, ಶ್ರೀಮತಿ ಪುಷ್ಪಾ ಹುಣಸ್ಯಾಳ, ಶ್ರೀಮತಿ ಶಿವಲೀಲಾ, ಡಾ. ಎಸ್.ಎಸ್. ಸಿದ್ದಾಪೂರ, ಡಾ. ಭಜರಂಗಿ ಜಾಧವ, ಶ್ರೀಮತಿ ಸವಿತಾ ಪಾಟೀಲ ಸೇರಿದಂತೆ ಬೋಧಕ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
“ಸಂಶೋಧನೆ ಎಂದರೆ ಉತ್ತರಗಳನ್ನು ಹುಡುಕುವುದು ಮಾತ್ರವಲ್ಲ; ಸಮಾಜದ ಭವಿಷ್ಯಕ್ಕೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುವ ಜ್ಞಾನಯಾತ್ರೆಯೇ ನಿಜವಾದ ಸಂಶೋಧನೆ.”
– ಡಾ.ಮಹೇಶ ಚಿಂತಾಮಣಿ

