ರೈತರ ಹೋರಾಟಕ್ಕೆ ಸಿಕ್ಕ ಫಲ | ಏಕ್ಕಲಮರಡಿ ಏತ ನೀರಾವರಿ ಯೋಜನೆಯ ಪಂಪ್ ವರ್ಕ್ ಪೂರ್ಣ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ಸುಮಾರು 13 ವರ್ಷಗಳಿಂದ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದೆ ರೈತರು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರು ನಡೆಸಿದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಫಲ ದೊರೆತಿದೆ. ಹೋರಾಟದ ವೇಳೆ ನಿರಾಣಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಮುರಗೇಶ ನಿರಾಣಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಾಕಿ ಉಳಿದಿದ್ದ ಪಂಪ್ ವರ್ಕ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಇಂಜಿನಿಯರಿಂಗ್ ಸಿಬ್ಬಂದಿಯನ್ನು ಏಕ್ಕಲಮರಡಿ ಏತ ನೀರಾವರಿ ಹೋರಾಟ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರೈತ ಮುಖಂಡರು, ಇಂಜಿನಿಯರಿಂಗ್ ಸಿಬ್ಬಂದಿ ಅತ್ಯಂತ ಗುಣಮಟ್ಟದಿಂದ, ಸಮಯಪ್ರಜ್ಞೆಯಿಂದ ಹಾಗೂ ಕಾರ್ಯನಿಷ್ಠೆಯಿಂದ ಕಾಮಗಾರಿ ಪೂರ್ಣಗೊಳಿಸಿರುವುದು ಶ್ಲಾಘನೀಯ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪಂಪ್ ವರ್ಕ್ ಪೂರ್ಣಗೊಂಡಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಗಮನಾರ್ಹವಾಗಿ, ಇದೇ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ರೈತರು ಕಳೆದ ಎರಡು ವಾರಗಳ ಹಿಂದೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ವಿಜಯಪುರ–ಧಾರವಾಡ ರಾಷ್ಟ್ರೀಯ ಹೆದ್ದಾರಿ ತಡೆದು, ಅರೆಬೆತ್ತಲೆ ಮೆರವಣಿಗೆ, ಉರುಳು ಸೇವೆ, ರಸ್ತೆ ಮಧ್ಯೆಯೇ ಒಲೆ ಹಚ್ಚಿ ಅಡುಗೆ ಮಾಡಿ ಊಟ ಮಾಡುವ ಮೂಲಕ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸುಮಾರು 13 ವರ್ಷಗಳಾದರೂ ಯೋಜನೆಯ ನೀರು ರೈತರ ಜಮೀನುಗಳಿಗೆ ತಲುಪದಿರುವುದನ್ನು ಖಂಡಿಸಿ ನಡೆದ ಈ ಹೋರಾಟ ರಾಜ್ಯದ ಗಮನ ಸೆಳೆದಿತ್ತು.
ಪ್ರತಿಭಟನೆಯ ತೀವ್ರತೆಯನ್ನು ಅರಿತು ಹೋರಾಟದ ಸ್ಥಳಕ್ಕೆ ಆಗಮಿಸಿದ್ದ ಮುರಗೇಶ ನಿರಾಣಿ ಅವರು ರೈತರೊಂದಿಗೆ ಮಾತುಕತೆ ನಡೆಸಿ ಬಾಕಿ ಉಳಿದಿದ್ದ ಪಂಪ್ ವರ್ಕ್ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೈತರು ತಮ್ಮ ಮಾತು ಉಳಿಸಿಕೊಂಡ ನಿರಾಣಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಇಂಜಿನಿಯರಿಂಗ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪಾಂಡು ಮಾಡಿಕ, ಸುರೇಶ್ ಜಾಂಬರೆ, ಅಪ್ಪಾಸಿ ಜಾದವ, ಸಿದ್ರಾಯ ಸನಸಿದ್ದ, ಸಂಜು ಬೋಸ್ಲೆ ಹಾಗೂ ಯುವ ಮುಖಂಡರಾದ ಈಶ್ವರ ನ್ಯಾಮಗೌಡ, ಹಣಮಂತ ಮರಡಿ, ಗೋಸಿರ ಕೊಣ್ಣೂರ, ಮಾದೇವ ಉಪ್ಪಲದಿನ್ನಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು. ಇಂಜಿನಿಯರಿಂಗ್ ಸಿಬ್ಬಂದಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿ ಅಭಿನಂದಿಸಿದರು.
ರೈತರ ಸಂಘಟಿತ ಹೋರಾಟ, ನಿರಾಣಿ ಆಡಳಿತ ಮಂಡಳಿಯ ಸ್ಪಂದನೆ ಹಾಗೂ ತಾಂತ್ರಿಕ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಯೋಜನೆಯ ಪ್ರಮುಖ ಕಾಮಗಾರಿ ಪೂರ್ಣಗೊಂಡಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡಿಸಿದ್ದು, ಈ ಘಟನೆ ರೈತರು ಮತ್ತು ನಿರಾಣಿ ಸಕ್ಕರೆ ಕಾರ್ಖಾನೆಯ ನಡುವಿನ ಪರಸ್ಪರ ವಿಶ್ವಾಸ, ಸಹಕಾರ ಮತ್ತು ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.

