ಉದಯರಶ್ಮಿ ದಿನಪತ್ರಿಕೆ
ಚಡಚಣ: ಆ.15ರಂದು ಆಯೋಜಿಸುವ 80 ನೇ ಸ್ವಾತಂತ್ಯೋತ್ಸವದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸುವ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ತಹಶೀಲ್ದಾರ ಸಂಜಯ ಇಂಗಳೆ ಸೂಚನೆ ನೀಡಿದರು.
ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರೋತ್ಸವದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರೋತ್ಸವದ ದಿನಾಚರಣೆ ಪ್ರಯುಕ್ತ ಆ.15ರಂದು ಬೆಳಗ್ಗೆ 8:30 ಕ್ಕೆ ಪಟ್ಟಣದ ಶ್ರೀ ಸಂಗಮೇಶ್ವರ ಶಾಲಾ ಕಾಲೇಜ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಖ್ಯ ವೇದಿಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದರಲ್ಲದೆ, ಸರ್ಕಾರದ ಶಿಷ್ಟಾಚಾರವನ್ನು ಚಾಚೂ ತಪ್ಪದೆ ಪಾಲಿಸಿ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ನಿರ್ದೇಶನ ನೀಡಿದರು.
ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳ ಸ್ವಚ್ಛತೆ ಕುರಿತು ಪ.ಪಂ.ಮುಖ್ಯಾಧಿಕಾರಿಗಳು ನಿಗಾ ವಹಿಸಬೇಕು. ಕುಡಿಯುವ ನೀರು, ಸ್ವಾತಂತ್ರ್ಯ ಚಳುವಳಿಯ ಮಹತ್ವ ಸಾರುವ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಕಾರ್ಯಕ್ರಮದ ವೇದಿಕೆ ವ್ಯವಸ್ಥೆ ಕುರಿತು ಅಧಿಕಾರಿಗಳು ಹಾಗೂ ಪಟ್ಟಣದ ವಿವಿಧ ಸಂಘಟನೆಯ ಗಣ್ಯರೊಂದಿಗೆ ಚರ್ಚಿಸಲಾಯಿತು.
ಇದೆ ಸಂದರ್ಭದಲ್ಲಿ ವಿವಿಧ ವೃತ್ತಿಯಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಸನ್ಮಾನಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ಪ.ಪಂ.ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ, ತಾ.ಪಂ.ಅಧಿಕಾರಿ ಅಶೋಕಕುಮಾರ ರಾಠೋಡ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಹವಾಲ್ದಾರ, ಸಿಡಿಪಿಓ ಸಾಹೇಬಗೌಡ ಜುಂಜರವಾಡ, ಬಿಇಓ ಎಚ್.ನಾಗೇಂದ್ರಪ್ಪ, ಪ.ಪಂ.ಸದಸ್ಯರು ಸೇರಿದಂತೆ, ಕಂದಾಯ ನೀರಿಕ್ಷಕ, ಶಿರಸ್ತೇದಾರ ಆರ್.ಎಸ್.ಚವ್ಹಾಣ, ಸುನೀಲ ಚವ್ಹಾಣ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ಪ್ರದಸ ವಿಠ್ಠಲ ಕೋಳಿ, ನಿವೃತ್ ಯೋಧರ ಸಂಘಟನೆಯ ಗಣ್ಯರಾದ ಕಾಂತುಗೌಡ ಪಾಟೀಲ, ಪ್ರಭಾಕರ ನೀರಾಳೆ, ದೇವೆಂದ್ರಪ್ಪ ಪಾಟೀಲ, ವಸಂತ ಭೈರಾಮಡಿ, ದಶರಥ ಬನಸೋಡೆ, ದೇವಾನಂದ ಸಿಂಗೆ, ಸೋಮು ಬಡಿಗೇರ ಸೇರಿದಂತೆ ವಿವಿಧ ಸಂಘಟನೆಯ ಗಣ್ಯರು ಹಾಗೂ ಅಬಕಾರಿ ಹಾಗೂ ಪೋಲಿಸ್ ಇಲಾಖೆ ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

