೧೪ ದಿನ ಚಾಲೂ, ೧೦ ದಿನ ಬಂದ್ | ಕೆಬಿಜೆಎನ್ನೆಲ್ ಅಧೀಕ್ಷಕ ಅಭಿಯಂತರ ಶಿವಶಂಕರ ದೇವಾಪುರ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿಗಾಗಿ ರಾಮಪುರ (ಪ.ಆ) ವೃತ್ತದ ವ್ಯಾಪ್ತಿಯ ಕಾಲುವೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗಳಿಗೆ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ್ ನಂತೆ ವಾರಬಂದಿ ಪದ್ಧತಿಯನುಸಾರ ೧೧೬ ದಿನಗಳವರೆಗೆ ಜು. ೨೮ರಿಂದ ನೀರು ಹರಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಧೀಕ್ಷಕ ಅಭಿಯಂತರರಾದ ಶಿವಶಂಕರ ದೇವಾಪುರ ತಿಳಿಸಿದ್ದಾರೆ.
ಮುಂಗಾರು ಹಂಗಾಮಿಗಾಗಿ ನೀರು ಪೋಲಾಗದಂತೆ, ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದಡಿ ಬರುವ ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಎರಡು ಜಲಾಶಯಗಳಲ್ಲಿ ನೀರಾವರಿಗಾಗಿ ಕಾಯ್ದಿರಿಸಿರುವ ನೀರಿನ ಪ್ರಮಾಣದಲ್ಲಿ ಮುಂಗಾರು ಹಂಗಾಮಿಗಾಗಿ ನೀರು ಹರಿಸುವ ಅವಧಿಯನ್ನು, ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಹೊರಹರಿವು ಪ್ರಮಾಣಕ್ಕೆ ಸಮನಾಗಿರುವವರೆಗೆ ಸತತವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಲು ಹಾಗೂ ಒಂದು ವೇಳೆ ಆಲಮಟ್ಟಿಗೆ ಒಳಹರಿವು ಕಡಿಮೆಯಾದ ಪಕ್ಷದಲ್ಲಿ ಜಲಾಶಯಗಳಲ್ಲಿನ ಸಂಗ್ರಹ ಆಧರಿಸಿ, ಈ ಹಿಂದೆ ಅನುಸರಿಸಿದ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ್ ನಂತೆ ವಾರಬಂದಿ ಪದ್ಧತಿಯನ್ನು ಅನುಸರಿಸಿ ೧೧೬ ದಿನಗಳವರೆಗೆ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುವುದು ಎಂದವರು ತಿಳಿಸಿದ್ದಾರೆ.
ಕಾಲುವೆ ಚಾಲೂ ದಿನಾಂಕಗಳು: ಜು. ೨೮ ರಿಂದ ಆ. ೧೦ರವರೆಗೆ, ಆ. ೨೧ಸ ರಿಂದ ಸೆ. ೩ರವರೆಗೆ, ಸೆ. ೧೪ ರಿಂದ ಸೆ. ೨೭ರವರೆಗೆ, ಅ. ೮ ರಿಂದ ಅ. ೨೧ರವರೆಗೆ ತಲಾ ೧೪ ದಿನಗಳಂತೆ, ನ. ೧ ರಿಂದ ನ. ೧೦ರವರೆಗೆ ೧೦ ದಿನಗಳಂತೆ ಒಟ್ಟು ೬೬ ದಿನಗಳ ಕಾಲ ಕಾಲುವೆಗಳಿಗೆ ನೀರು ಚಾಲೂ ಇರುವ ದಿನಗಳನ್ನು ನಿಗದಿಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಕಾಲುವೆ ಬಂದ್ ದಿನಾಂಕಗಳು: ಆ.೧೧ ರಿಂದ ಆ. ೨೦ರವರೆಗೆ, ಸೆ. ೪ ರಿಂದ ಸೆ. ೧೩ರವರೆಗೆ, ಸೆ. ೨೮ ರಿಂದ ಅ. ೭ರವರೆಗೆ , ಅ. ೨೨ ರಿಂದ ಅ. ೩೧ರವರೆಗೆ ಹಾಗೂ ನ. ೧೧ ರಿಂದ ನ. ೨೦ರವರೆಗೆ ತಲಾ ೧೦ ದಿನಗಳಂತೆ ಒಟ್ಟು ೫೦ ದಿನಗಳ ಕಾಲ ಕಾಲುವೆ ಬಂದ್ ಇಡಲಾಗುವುದು ಎಂದವರು ತಿಳಿಸಿದ್ದಾರೆ.
ರೈತರು ನೀರನ್ನು ಮಿತವಾಗಿ ಬಳಸಿ, ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಅಧಿಕಾರಿಗಳೊಂದಿಗೆ ಸಹಕರಿಸಿ ಯಶಸ್ವಿ ನೀರು ನಿರ್ವಹಣೆಗೆ ಕೈಜೋಡಿಸಬೇಕಾಗಿ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
