ಕೆರೆ ಪುನಶ್ಚೇತನ ಕಾಮಗಾರಿ ಭೇಟಿ ವೇಳೆ ವಿಜಯಪುರ ಸಿಇಒ ರಿಷಿ ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸುವುದರ ಜೊತೆಗೆ ಕಾಮಗಾರಿ ಸ್ಥಳಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯ ಪ್ರಗತಿ, ಗುಣಮಟ್ಟ, ಕಾರ್ಮಿಕರ ಹಾಜರಾತಿ ಹಾಗೂ ಮಾನವ ದಿನಗಳ ಸೃಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಕಾರ್ಮಿಕರ ಕೂಲಿ ಪಾವತಿಯಲ್ಲಿ ಯಾವುದೇ ತಾಂತ್ರಿಕ ತೊಂದರೆ ಉಂಟಾಗದಂತೆ ಕ್ರಮವಹಿಸಬೇಕು. ಎಲ್ಲ ಕಾರ್ಮಿಕರ ಫೇಸ್ ಅಥೆಂಟಿಕೇಶನ್ ಕಡ್ಡಾಯವಾಗಿ ಪೂರ್ಣಗೊಳಿಸಿ, ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಈ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ೧೨೫ ದಿನಗಳ ಉದ್ಯೋಗ ಹಾಗೂ ಪ್ರತಿ ದಿನ ೩೮೨ ರೂ. ಕೂಲಿ ನೀಡಲಾಗುತ್ತಿದೆ. ಕೃಷಿ ಹೊಂಡ,ದನಗಳ ಶೆಡ್, ಮೇಕೆ ಶೆಡ್, ತೋಟಗಾರಿಕೆ ಅಭಿವೃದ್ಧಿ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶವಿದ್ದು, ಗ್ರಾಮೀಣ ಕುಟುಂಬಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಜಯಪುರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ೧೦೦ ಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸಿ, ನಿಗದಿತ ಗುರಿಗೆ ಅನುಗುಣವಾಗಿ ಮಾನವ ದಿನಗಳ ಸೃಜನೆ ಸಾಧಿಸಬೇಕು. ಯೋಜನೆಯಡಿ ಉದ್ಯೋಗ ಬಯಸಿದವರು ಉದ್ಯೋಗದಿಂದ ವಂಚಿತವಾಗಬಾರದು. ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಯೋಜನೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸಿ, ಉದ್ಯೋಗ ಬಯಸುವ ಎಲ್ಲ ಕುಟುಂಬಗಳನ್ನು ಕಾಮಗಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಸಹಾಯಕ ನಿರ್ದೇಶಕ ಎಸ್.ಆರ್. ಕಟ್ಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಮದೇವ ಶಿಂಧೆ, ಜಿಲ್ಲಾ ಐಇಸಿ ಸಂಯೋಜಕಿ ಸುವರ್ಣ ಭಜಂತ್ರಿ, ಉಪ ಪ್ರಾಂಶುಪಾಲ ಬಿ.ಎಂ. ಕೊಪ್ಪದ, ತಾಂತ್ರಿಕ ಸಂಯೋಜಕ ಪರಶುರಾಮ ಶಹಾಪುರ, ಐಇಸಿಯ ರಾಘವೇಂದ್ರ ಭಜಂತ್ರಿ, ತಾಂತ್ರಿಕ ಸಹಾಯಕ ಮಂಜುನಾಥ ಶಟಗಾರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಎಫ್‌ಟಿ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

