ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ೨೦೨೬ರ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡೂ ತಿಂಗಳುಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿ ಹಾಗೂ ಜೋಳ ಮತ್ತಿತರ ಧಾನ್ಯವನ್ನು ಇದೇ ಆಗಸ್ಟ್ ತಿಂಗಳಿನಲ್ಲೇ ವಿತರಿಸಲು ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಎರಡೂ ತಿಂಗಳ ಧಾನ್ಯವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ (ಎರಡೂ ತಿಂಗಳು ಸೇರಿ) ಒಟ್ಟು ೭೦ ಕೆಜಿ ಆಹಾರ ಧಾನ್ಯ ಸಿಗಲಿದೆ. ಇದರಲ್ಲಿ ೪೨ ಕೆಜಿ ಜೋಳ ಹಾಗೂ ೨೮ ಕೆಜಿ ಅಕ್ಕಿ ಇರಲಿದೆ ಎಂದವರು ತಿಳಿಸಿದ್ದಾರೆ.
ಆದ್ಯತಾ (ಬಿಪಿಎಲ್ ) ಕಾರ್ಡ್ದಾರರಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ ೫ ಕೆಜಿಯಂತೆ, ಎರಡೂ ತಿಂಗಳಿಗೆ ಒಟ್ಟು ೧೦ ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಇದರಲ್ಲಿ ೬ ಕೆಜಿ ಜೋಳ ಮತ್ತು ೪ ಕೆಜಿ ಅಕ್ಕಿ ಸೇರಿದೆ. ಪಡಿತರ ಪಡೆದುಕೊಳ್ಳಲು ಎರಡು ಪ್ರತ್ಯೇಕ ಬಯೋಮೆಟ್ರಿಕ್ (ಹೆಬ್ಬೆರಳ ಗುರುತು) ನೀಡುವುದಿ ಕಡ್ಡಾಯವಾಗಿದೆ ಎಂದವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಆಹಾರ ಧಾನ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

