ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಹಾಗೂ ಚಿಂತನಾ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಚಡಚಣದ ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ತಿಂಗಳಿಗೊಂದು ಪುಸ್ತಕ’ ಉಪನ್ಯಾಸ ಮಾಲೆಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಜಪಾನಿನ ಜನರ ದೀರ್ಘಾಯುಷ್ಯ, ಸಂತೋಷ ಮತ್ತು ಅರ್ಥಪೂರ್ಣ ಬದುಕಿನ ತತ್ವವನ್ನು ಪ್ರತಿಪಾದಿಸುವ ಪ್ರಸಿದ್ಧ ‘ಇಕಿಗೈ’ ಪುಸ್ತಕದ ಕುರಿತು ವಿದ್ಯಾರ್ಥಿಗಳ ಉಪನ್ಯಾಸ ಹಾಗೂ ಚರ್ಚಾ ಕಾರ್ಯಕ್ರಮವೂ ನಡೆಯಿತು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇಂಗ್ಲಿಷ್ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಹಿರಿಯ ನಿರ್ದೇಶಕ ಬಸವರಾಜ ಯಂಕಂಚಿ, “ಒಳ್ಳೆಯ ಪುಸ್ತಕಗಳು ಮನುಷ್ಯನ ಆಲೋಚನಾ ಶಕ್ತಿಯನ್ನು ವಿಸ್ತರಿಸುವುದರ ಜೊತೆಗೆ ಜೀವನಕ್ಕೆ ಸರಿಯಾದ ದಿಕ್ಕು ತೋರಿಸುವ ಶಕ್ತಿಯನ್ನು ಹೊಂದಿವೆ. ಓದುವ ಹವ್ಯಾಸವು ವ್ಯಕ್ತಿತ್ವ ವಿಕಸನದ ಪ್ರಮುಖ ಅಡಿಪಾಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ಕೆ. ಬಿರಾದಾರ್, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗಷ್ಟೇ ಸೀಮಿತವಾಗದೆ ಜಾಗತಿಕ ಮಟ್ಟದ ಉತ್ತಮ ಗ್ರಂಥಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂಗ್ಲಿಷ್ ವಿಭಾಗದ ‘ಪುಸ್ತಕ ಭಾಷಣ ಸರಣಿ’ ಉಪಕ್ರಮವು ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯ, ವಿಮರ್ಶಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಆಡಳಿತಾಧಿಕಾರಿ ಡಾ. ಎಸ್. ಎಸ್. ಚೋರಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕ ಡಾ. ಎ. ಎಸ್. ದೇಸಾಯಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಬಸವರಾಜ ಯಳ್ಳೂರ, ಸಹಾಯಕ ಪ್ರಾಧ್ಯಾಪಕರಾದ ವಿ. ವಿ. ಘೆವಂಡೆ, ಡಾ. ಎಸ್. ಬಿ. ರಾಠೋಡ, ಡಾ. ಆರ್. ಎಸ್. ಮಾವಿನಮರ, ಪ್ರೊ. ಎಂ. ಎ. ಜನವಾಡ, ಪ್ರೊ. ಎ. ಎಸ್. ಪಾಟೀಲ, ಪ್ರೊ. ಸಂಜಯಕುಮಾರ ಅವಟಿ, ಬಸವರಾಜನೀಲವಾಣಿ, ಉಪನ್ಯಾಸಕ ವೃಂದ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕುಮಾರಿ ಸಾಕ್ಷಿ ಬಡಿಗೇರ ನಿರೂಪಿಸಿದರೆ, ಕುಮಾರ ಅಲ್ಲಾಉದ್ದೀನ್ ದರ್ಶನಾಳ ವಂದಿಸಿದರು.ಈ ಪುಸ್ತಕ ಉಪನ್ಯಾಸ ಮಾಲೆಯು ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸುವುದರ ಜೊತೆಗೆ ಜ್ಞಾನ, ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

