ಉದಯರಶ್ಮಿ ದಿನಪತ್ರಿಕೆ
ಅಥಣಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರು ಹಿರಿಯ ರಾಜಕೀಯ ನಾಯಕ ಲಕ್ಷ್ಮಣ ಸಂಗಪ್ಪ ಸವದಿ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಹಿಡಿದು ಜಯಘೋಷಗಳನ್ನು ಕೂಗಿ, ಸಚಿವರಾದ ಲಕ್ಷ್ಮಣ ಸವದಿ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಲಕ್ಷ್ಮಣ ಸವದಿ ಅವರಿಗೆ ಜಯವಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು ಜಯ ಘೋಷಗಳ ಮಧ್ಯೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಲವು ಹಿರಿಯ ಮುಖಂಡರು ಲಕ್ಷ್ಮಣ ಸವದಿ ಅವರು ದೀರ್ಘ ರಾಜಕೀಯ ಅನುಭವ ಹೊಂದಿರುವ ಜನನಾಯಕರು. ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ ಹಾಗೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅನುಭವ ಅವರಿಗಿದೆ. ರಾಜ್ಯದ ಅಭಿವೃದ್ಧಿಗೆ ಅವರ ಆಡಳಿತಾತ್ಮಕ ಅನುಭವವು ಹೆಚ್ಚಿನ ಬಲ ನೀಡಲಿದ್ದು, ಜನಪರ ಆಡಳಿತಕ್ಕೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು. ಅಥಣಿ ಕ್ಷೇತ್ರದ ಜನತೆಗೆ ಇದು ಹೆಮ್ಮೆಯ ಕ್ಷಣವಾಗಿದ್ದು, ಕ್ಷೇತ್ರದ ರಸ್ತೆ, ನೀರಾವರಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದರು. ಹಾಗೂ ರೈತರು, ಯುವಕರು, ಮಹಿಳೆಯರು ಮತ್ತು ವಿವಿಧ ವರ್ಗಗಳ ಜನರ ಬಹುಕಾಲದ ಬೇಡಿಕೆಗಳಿಗೆ ಸಚಿವರ ಮೂಲಕ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು.
ಸವದಿ ಅವರು ಕ್ಷೇತ್ರದ ಅಭಿವೃದ್ಧಿಯನ್ನು ಸದಾ ಆದ್ಯತೆಯಾಗಿ ಪರಿಗಣಿಸುವ ನಾಯಕರಾಗಿದ್ದು, ಸಚಿವ ಸ್ಥಾನದಿಂದ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿ ಯೋಜನೆಗಳು ಹಾಗೂ ಹೊಸ ಕಾರ್ಯಕ್ರಮಗಳು ಬರಲಿವೆ. ಇದರಿಂದ ಗಡಿ ಭಾಗದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವ ಆಶಾಭಾವನೆ ವ್ಯಕ್ತವಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.
ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.

