ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೂತನ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಸಚಿವ ಎಂ.ಬಿ. ಪಾಟೀಲರನ್ನು ದೂಷಿಸುತ್ತಿರುವುದು ಸಂಪೂರ್ಣ ಅಸಮರ್ಥನೀಯ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ ಅವರು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರೂ ಜನ ಶಾಸಕರು ಸಚಿವ ಸ್ಥಾನಕ್ಕೆ ಅತ್ಯಂತ ಅರ್ಹರಾಗಿದ್ದಾರೆ. ಹಿಂದಿನ ಸಂಪುಟ ವಿಸ್ತರಣೆಯಲ್ಲಿ ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ಒಲಿದಿತ್ತು. ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಆಶಾಭಾವನೆ ಇತ್ತು. ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಬಯಕೆಯೂ ಆಗಿತ್ತು. ಈ ಕುರಿತು ಎಂ.ಬಿ.ಪಾಟೀಲರು ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅದು ಕೈಗೂಡಲಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಸಿಗುವ ವಿಶ್ವಾಸವಿದೆ. ಈ ಮಧ್ಯೆ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ. ಪಾಟೀಲರೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, ‘ನಾವು ಎಂ.ಬಿ. ಪಾಟೀಲರಿಂದಲೇ ಸಚಿವರಾದೆವು’ ಎಂದು ಹೇಳುತ್ತಿದ್ದರೆ? ಆದರೆ, ಸಚಿವ ಸ್ಥಾನ ಸಿಗದಿದ್ದಾಗ ಇದಕ್ಕೆ ಎಂ. ಬಿ. ಪಾಟೀಲರೇ ಕಾರಣ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಡಾ. ಸಂಬಣ್ಣಿ ಅವರು ಹೇಳಿದ್ದಾರೆ.
ಪಕ್ಷ ಸಂಘಟನೆಯಲ್ಲಿ ತನು, ಮನ, ಧನದಿಂದ ಸದಾ ಶ್ರಮಿಸುತ್ತಿರುವ ಎಂ.ಬಿ.ಪಾಟೀಲರಿಗೆ ಹಲವು ಬಾರಿ ಸಚಿವ ಸ್ಥಾನ ತಪ್ಪಿದೆ. 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಹಾಗೂ 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಆದರೆ, ಆ ಸಂದರ್ಭದಲ್ಲಿ ಅವರು ಯಾರನ್ನು ದೂಷಿಸಿರಲಿಲ್ಲ. ತಾಳ್ಮೇಯಿಂದ ಕಾಯ್ದರು ಎಂಬುದನ್ನು ಸ್ಮರಿಸಬೇಕು. ನಾಯಕರಾದವರು ವಸ್ತುಸ್ಥಿತಿಯನ್ನು ಅರಿತು ಮಾತನಾಡಬೇಕು. ಯಾವುದೇ ಆಧಾರವಿಲ್ಲದೆ ವಿನಾಕಾರಣ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಡಾ. ಗಂಗಾಧರ ಸಂಬಣ್ಣಿ ತಿಳಿಸಿದ್ದಾರೆ.

