ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿರುಪತಿಗೆ ಪ್ರಯಾಣ ಬೆಳೆಸುವ ಭಕ್ತಾದಿಗಳ ಬೇಡಿಕೆ ಈಡೇರಿದಂತಾಗಿದ್ದು, ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ವಿಜಯಪುರ ಮಾರ್ಗವಾಗಿ ತಿರುಪತಿಗೆ ಸಂಚಾರ ಬೆಳೆಸಲಿದೆ. ಆ ಮೂಲಕ ವಿಜಯಪುರದಿಂದ ತಿರುಪತಿಗೆ ಹೋಗುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗಲಿದ್ದು, ಅನೇಕ ವರ್ಷಗಳ ಬೇಡಿಕೆ ಈಡೇರಿಕೆಯಾದಂತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರದಿಂದ ಸುಕ್ಷೇತ್ರ ತಿರುಪತಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಣ ಬೆಳೆಸುತ್ತಾರೆ, ವಿಜಯಪುರದಿಂದಲೇ ನೇರವಾಗಿ ರೈಲು ಸಂಪರ್ಕ ಇರಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಕಾಳಜಿ ಹಾಗೂ ಮುತವರ್ಜಿ ವಹಿಸಿ ಈ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದೆ, ಅದರ ಭಾಗವಾಗಿ ಈಗ ತಿರುಪತಿಗೆ ನೇರವಾಗಿ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಅನುಕೂಲವಾಗಲು ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ತಿರುಪತಿಗೆ ಹೆಚ್ಚುವರಿಯಾಗಿ ಪ್ರಯಾಣ ಬೆಳೆಸುವ ಅನುಕೂಲ ಕಲ್ಪಿಸಲಾಗಿದೆ, ಆ ಮೂಲಕ ಈ ರೈಲು ಸೊಲ್ಲಾಪೂರ-ವಿಜಯಪುರ-ಗದಗ, ಹೊಸಪೇಟೆ ಮಾರ್ಗವಾಗಿ ತಿರುಪತಿಗೆ ತಲುಪಲಿದೆ. ಇದರಿಂದ ಉಳಿದ ಜಿಲ್ಲೆಗಳ ಪ್ರಯಾಣಿಕರಿಗೂ ಅತ್ಯಂತ ಅನುಕೂಲವಾಗಿದೆ, ಒಟ್ಟಾರೆಯಾಗಿ ಭಕ್ತರ ಬೇಡಿಕೆ ಈಡೇರಿದಂತಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.

