ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಪಟ್ಟಣದ 12ನೇ ವಾರ್ಡ್ ನ ಸ್ಟೇಡಿಯಂ ಬಡಾವಣೆಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿ ಅವೈಜಾನಿಕವಾಗಿ ಕೂಡಿದ್ದು, ನೀಲನಕ್ಷೆ ಪ್ರಕಾರ ಯಾವುದೇ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಗುತ್ತಿಗೆ ತೆಗೆದುಕೊಂಡಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸುಪ್ರೀತ್ ಅವರನ್ನ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಪುರಸಭೆ ಮುಖ್ಯಾಧಿಕಾರಿ ಸುರೇಶ್ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ , ಅವರು ಹಸಿರುನಿಶಾನೆ ತೋರುವರೆಗೂ ಕಾಮಗಾರಿ ಬಿಲ್ ತಡೆ ಹಿಡಿಯಬೇಕೆಂದು ಪುರಸಭೆ ಮಾಜಿ ಸದಸ್ಯ ಐಡಿಯಾ ವೆಂಕಟೇಶ್ ಒತ್ತಾಯಿಸಿದರು.
ಪಟ್ಟಣದ ಸ್ಟೇಡಿಯಂ ಬಡಾವಣೆಯಲ್ಲಿ ಶಾಸಕರ ನಿಧಿಯಲ್ಲಿ ಒಂದು ಕೋಟಿ 30 ಲಕ್ಷದ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ. ಕಾಮಗಾರಿ ಗುತ್ತಿಗೆ ತೆಗೆದುಕೊಂಡಿರುವ ನಿರ್ಮಿತಿ ಕೇಂದ್ರ ಇಂಜಿನಿಯರ್ ಸುಪ್ರೀತ್ ಎಂಬುವವರು, ತಮಗೆ ಇಷ್ಟ ಬಂದ ರೀತಿಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಮೇಲುಗಡೆಯಲೆಲ್ಲ ಎರಡು ಅಡಿ ಅಗಲ ಚರಂಡಿ ಮಾಡಿ, ಕೆಳ ಭಾಗಕ್ಕೆ ಬರುತ್ತಿದ್ದಂತೆ ಒಂದೂವರೆ ಅಡಿ ಅಗಲವಿರುವ ಚರಂಡಿಗೆ ಸಂಪರ್ಕ ಕೊಟ್ಟಿದ್ದಾರೆ. ಅಲ್ಲದೆ ಚರಂಡಿಗಳನ್ನು ನೇರವಾಗಿ ನಿರ್ಮಾಣ ಮಾಡಿಲ್ಲ. ಪ್ರಭಾವಿ ಮನೆಯವರ ತಾಳಕ್ಕೆ ತಕ್ಕಂತೆ ಕುಣಿದು, ಅಂಕುಡೊಂಕು ರೀತಿಯಲ್ಲಿ ಚರಂಡಿ ಕಾಮಗಾರಿ ಮುಗಿಸಿದ್ದಾರೆ. ಇದರಿಂದ ಮಳೆ ಬಂದರೆ ನೀರು ಚರಂಡಿ ಮೂಲಕ ಸುಗಮವಾಗಿ ಹೋಗದೆ ಮನೆ ಹಾಗೂ ರಸ್ತೆಗೆ ನುಗ್ಗುತ್ತದೆ. ಈ ಬಗ್ಗೆ ಇಂಜಿನಿಯರ್ ಸುಪ್ರೀತ್ ಅವರನ್ನ ಫೋನ್ ಮೂಲಕ ಸಂಪರ್ಕಿಸಿದರೆ, ನಾಳೆ, ನಾಡಿದ್ದು ಬರುತ್ತೇನೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಇನ್ನು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಇದಕ್ಕೂ, ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಐಡಿಯಾ ವೆಂಕಟೇಶ್ ಆರೋಪಿಸಿದರು.
“ಸಾರ್ವಜನಿಕರು ಸುಲಲಿತವಾಗಿ ಓಡಾಡಲು ಮಾಡಬೇಕಾಗಿರುವ ಡಕ್ ಕೂಡ ಅವೈಜ್ಞಾನಿಕವಾಗಿ ಕೂಡಿದೆ. ಸಮತಟ್ಟ ಪ್ರದೇಶದಿಂದ ಎರಡು ಅಡಿ ಎತ್ತರದಲ್ಲಿ ಡಕ್ ನಿರ್ಮಿಸಿದ್ದಾರೆ. ಇದರಿಂದ ಪುಟ್ಟಪುಟ್ಟ ಮಕ್ಕಳು, ವಯೋವೃದ್ಧರು ಓಡಾಡಲು ಕಷ್ಟವಾಗಿದೆ. ಬೈಕ್ , ಕಾರುಗಳ ಸಂಚಾರ ಅಸಾಧ್ಯವಾಗಿದೆ.”
– ಮಹೇಶ್
ಸ್ಟೇಡಿಯಂ ಬಡಾವಣೆ ನಿವಾಸಿ

