ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಇಂಡಿ ತಾಲೂಕು ಆಡಳಿತವು ನದಿ ತೀರದ ಗ್ರಾಮಗಳಲ್ಲಿ ಘೋಷಿಸಿದೆ.
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಇಂಡಿ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರು ಸ್ವತಃ ಭೀಮಾ ನದಿ ಪಾತ್ರದ ಪ್ರವಾಹ ಪೀಡಿತ ಸೂಕ್ಷ್ಮ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರು ತಾಲೂಕಿನ ಪ್ರಮುಖ ನದಿ ತೀರದ ಗ್ರಾಮಗಳಾದ ಬರಗುಡಿ, ಪಡನೂರ, ಶಿರಗೂರ, ಗುಬ್ಯಾಡ ಮತ್ತು ಅಗರಖೇಡ ಸೇರಿದಂತೆ ವಿವಿಧ ಪ್ರದೇಶಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದರು.
ನದಿಯ ಒಳಹರಿವು ಹಾಗೂ ಗ್ರಾಮಗಳ ಸುರಕ್ಷತೆಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಎಲ್ಲರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ವಿನಂತಿಸಿಕೊಂಡರು.
ನೀರಿನ ಸೆಳೆತ ಹೆಚ್ಚಿರುವುದರಿಂದ ಸಾರ್ವಜನಿಕರು, ಯುವಕರು ಅಥವಾ ಮಹಿಳೆಯರು ಯಾವುದೇ ಕಾರಣಕ್ಕೂ ಈಜಲು, ಬಟ್ಟೆ ತೊಳೆಯಲು ಅಥವಾ ಸೆಲ್ಫಿ ತೆಗೆದುಕೊಳ್ಳಲು ನದಿಗೆ ಇಳಿಯಬಾರದು.
ನದಿ ಪಾತ್ರದ ರೈತರು ತಮ್ಮ ಹಸು, ಎಮ್ಮೆ, ಕುರಿ ಸೇರಿದಂತೆ ದನ-ಕರುಗಳನ್ನು ಮೇಯಿಸಲು ನದಿಯ ಪಕ್ಕಕ್ಕೆ ಬಿಡಬಾರದು. ಸುರಕ್ಷಿತ ಹಾಗೂ ಎತ್ತರವಾದ ಪ್ರದೇಶಗಳಲ್ಲಿ ಜಾನುವಾರುಗಳನ್ನು ಕಟ್ಟಬೇಕು.
ಪ್ರವಾಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳನ್ನು ನಂಬಬಾರದು. ತಾಲೂಕು ಆಡಳಿತ ನೀಡುವ ಅಧಿಕೃತ ಸೂಚನೆಗಳನ್ನು ಮಾತ್ರ ಪಾಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪಂಡಿತ್ ಕೊಡಹೊನ್ನ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.

