ಸ್ಟೇಟಸ್ ಕೋ ಆದೇಶದ ನಡುವೆಯೂ ರಸ್ತೆ ಕಾಮಗಾರಿ | ಕ್ರಮಕ್ಕೆ ಒತ್ತಾಯಿಸಿ ನ್ಯಾಯವಾದಿ ಅಮರಣ್ಣವರ ದೂರು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಿವಿಲ್ ನ್ಯಾಯಾಲಯವು ದಾವಾ ಆಸ್ತಿಗೆ ಸಂಬಂಧಿಸಿದಂತೆ ಜು೨೮ ರಂದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕಾಮಗಾರಿ ಮಾಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನ್ಯಾಯವಾದಿ ಎಸ್.ಆರ್.ಅಮರಣ್ಣವರ ದೂರಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ದೇವೂರು ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು, ಇಲ್ಲಿ ನನ್ನ ಕುಟುಂಬದ ಜಮೀನು ಇದೆ. ಸರ್ಕಾರದಿಂದ ಯಾವುದೇ ಪರಿಹಾರ ಹಣವಾಗಲೀ, ನೊಟೀಸಾಗಲಿ ಬಂದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮಧ್ಯಂತರ ತಡೆಯಾಜ್ಞೆ ಕೋರಲಾಗಿ ನ್ಯಾಯಾಲಯ ಸ್ಟೆಟಸ್ ಕೋ ಆದೇಶವನ್ನು ನೀಡಿದೆ. ಈ ಆದೇಶವನ್ನು ನಾನು ನೇರವಾಗಿ ಸಂಬಂಧಿಸಿದ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ದಾಖಲೆ ಸಮೇತ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುತ್ತಿಗೆದಾರರು ನ್ಯಾಯಾಲಯದ ಆದೇಶವನ್ನು ಮೀರಿ ಕಾಮಗಾರಿ ಮಾಡುತ್ತಿದ್ದು ಇದರಿಂದ ನಮಗೆ ತೊಂದರೆ ಆಗುತ್ತಿದೆ.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ನಿರತರಿಗೆ ಆದೇಶ ಪತ್ರ ಕೊಡಲು ಹೋದರೆ ಸ್ವೀಕರಿಸುತ್ತಿಲ್ಲ. ಕಾಮಗಾರಿಯನ್ನೂ ಬಂದ್ ಮಾಡುತ್ತಿಲ್ಲ. ೧೧೨ ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಆದೇಶ ಇದ್ದರೂ ಇವರು ಕಾಮಗಾರಿ ಮುಂದುವರೆಸುತ್ತಿರುವದರ ಹಿಂದೆ ಏನೋ ಷಡ್ಯಂತ್ರ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರೆಸಿ ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಇದೇ ವೇಳೆ ಜೆ.ಎಂ.ಚಲಮಿ ವಕೀಲರು ಮಾತನಾಡಿ, ಹೊಲಗಳಲ್ಲಿ ರಸ್ತೆ ಅಗಲೀಕರಣ ಮಾಡುವದರಿಂದ ರೈತರಿಗೆ ಹಾನಿ ಆಗುತ್ತೆ. ಸೂಕ್ತ ಪರಿಹಾರ ನೀಡಿ ಕಾಮಗಾರಿ ಮಾಡಿದಲ್ಲಿ ರೈತರಿಗೆ ಅನುಕೂಲ ಆಗುತ್ತದೆ. ಆದರೆ ಯಾವುದೇ ಪರಿಹಾರ ನೀಡದೇ, ರೈತರಿಗೆ ಮಾಹಿತಿ ನೀಡದೇ ಇಂತಹ ಕಾಮಗಾರಿಗಳನ್ನು ಮಾಡುವದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೂ ಕೂಡ ಅದೇ ಸಮಸ್ಯೆ ಆಗುತ್ತಿದ್ದು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರೆಸುತ್ತಿರೋದು ವಿಪರ್ಯಾಸ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಎಚ್ಚೆತ್ತು ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ನ್ಯಾಯಾಲಯದ ಮುಂದಿನ ಆದೇಶಕ್ಕೆ ಕಾಯಬೇಕು ಎಂದರು.
ಈ ವೇಳೆ ನ್ಯಾಯವಾದಿಗಳಾದ ಎಲ್.ಆರ್.ನಾಲತವಾಡ, ಎಸ್.ಸಿ.ನಾಯಕ, ಎಸ್.ಜಿ.ಹೊಕ್ರಾಣಿ, ಎಸ್.ಬಿ.ಬಿರಾದಾರ, ಸಿ.ಎಸ್.ಕಾಖಂಡಕಿ ಇದ್ದರು.

