ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆ ವತಿಯಿಂದ ಆ.೨ ರಂದು ನಡೆದ ಪೊಲೀಸ್ ಕಾನ್ಸ್ಟೇಬಲ್ (ಸಿಇಟಿ) ಪರೀಕ್ಷೆಯಲ್ಲಿನ ಪರೀಕ್ಷಾ ನಿರ್ವಹಣಾ ಲೋಪಗಳ ಕುರಿತು ತನಿಖೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಆನಂದ ಅವರಿಗೆ ಮನವಿ ಸಲ್ಲಿಸಿದರು
ಈ ವೇಳೆ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ಲಕ್ಷ್ಮಣ ಕಂಬಾಗಿ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಪೊಲೀಸ್ ಕಾನ್ಸೆ ಬಲ್ (ಸಿಇಟಿ) ಪರೀಕ್ಷೆಯ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಯ ಕ್ರಮ ಸಂಖ್ಯೆ ಮತ್ತು[ ಓಎಂಆರ್ ] ಉತ್ತರ ಪತ್ರಿಕೆಯ ಸಂಖ್ಯೆಯಲ್ಲಿ ವ್ಯತ್ಯಾಸವಿರುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಇಂತಹ ಪ್ರಮುಖ ಬದಲಾವಣೆಯ ಕುರಿತು ಅಭ್ಯರ್ಥಿಗಳಿಗೆ ಮುಂಚಿತವಾಗಿ ಸ್ಪಷ್ಟ ಮಾಹಿತಿ ನೀಡುವುದು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸರಿಯಾದ ಮಾರ್ಗದರ್ಶನ ನೀಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿತ್ತು.
ಅದರ, ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಗೊಂದಲ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳು ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವುದರಿಂದ, ಇಂತಹ ಲೋಪಗಳಿಂದ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದು ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರದ ಜವಾಬ್ದಾರಿಯಾಗಿದೆ.
ಆದ್ದರಿಂದ ಪರೀಕ್ಷೆಯಲ್ಲಿನ ರಾಜ್ಯವ್ಯಾಪಿ ಗೊಂದಲದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗಿರೀಶ ಕಲಘಟಗಿ ಹಣಮಂತ ನಾಯ್ಕೋಡಿ ಇದ್ದರು.

