ಆಲಮೇಲದಲ್ಲಿ ನಡೆದ ತಾಲ್ಲೂಕು ಬಣಜಿಗ ಸಮಾವೇಶ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಸಲಹೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಬಣಜಿಗ ಸಮಾಜದ ಸಂಘಟನೆ ಬಲಿಷ್ಠವಾಗಬೇಕಾದರೆ ಸಮಾಜದ ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ಸಾಗಬೇಕು. ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯ ಮೂಲಕ ಯುವಜನತೆ ಮುಂದೆ ಬರಬೇಕು. ಸಮಾಜದ ಅಭಿವೃದ್ಧಿಗೆ ಹಿರಿಯರ ಅನುಭವ ಮತ್ತು ಯುವಕರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಆಲಮೇಲ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ನಡೆದ ತಾಲ್ಲೂಕು ಬಣಜಿಗ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಗಳಿಗೆ ತಲುಪಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜದ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಮಾಜದ ಸಂಘಟನೆ ಕೇವಲ ಚುನಾವಣೆ ಅಥವಾ ಸಮಾವೇಶಗಳಿಗೆ ಸೀಮಿತವಾಗಬಾರದು. ವರ್ಷಪೂರ್ತಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಸ್ಯರಲ್ಲಿ ಪರಸ್ಪರ ಸಹಕಾರ, ವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸಬೇಕು. ಸಮಾಜದ ಪ್ರಗತಿಗಾಗಿ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದೇ ಕುಟುಂಬದಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಯುವಕರು ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಅವರು ಹೇಳಿದರು.
ಶಾಸಕ ಅಶೋಕ ಮನಗೂಳಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಣಜಿಗ ಸಮಾಜ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ದೊಡ್ಡಪ್ಪಗೌಡ ಪಾಟೀಲ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪುರ ವೇದಿಕೆಯಲ್ಲಿದ್ದರು.
ಶಂಕರಾರೂಢ ಸ್ವಾಮೀಜಿ, ಚಂದ್ರಶೇಖರ ಶ್ರೀ, ವಿರಕ್ತಮಠದ ಶ್ರೀ, ರಾಂಪೂರಮಠದ ನಿತ್ಯಾನಂದ ಶಿವಯೋಗಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಸಿದ್ಧಲಿಂಗ ಸುಬೇಧಾರ ವಹಿಸಿದ್ದರು.
ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು.
ಮಲ್ಲಿಕಾರ್ಜುನ ಜೋಗುರ ಪ್ರಸ್ತಾವಿಕವಾಗಿ ಮಾತನಾಡಿದರು.
ಎಸ್ ಎಸ್‌ಎಲ್ ಸಿ, ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಗಳಿಗೆ ತಲಾ ೨ಸಾವಿರ ರೂ ನಗದು , ಫಲಕ ನೀಡಿ ಗೌರವಿಸಲಾಯಿತು.
ನೂತನ ತಾಲ್ಲೂಕು ಘಟಕ, ಮಹಿಳಾಘಟಕ, ಯುವ ಘಟಕಗಳ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಶಿವಶರಣ ಗುಂದಗಿ ಸ್ವಾಗತಿಸಿದರು. ಶ್ರೀಶೈಲ ಮಠಪತಿ ನಿರೂಪಿಸಿದರು. ಶಿವಾನಂದ ಮಾರ್ಸನಳ್ಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರೂಪಕಗಳು ಜರುಗಿದವು.

