ಸಿಸಿಟಿವಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ | ಪರೀಕ್ಷೆ ಬರೆಯಲಿರುವ ೨೪೪೩೪ ಅಭ್ಯರ್ಥಿಗಳು | ೬೧ ಪರೀಕ್ಷಾ ಕೇಂದ್ರಗಳಲ್ಲಿ ೨೪೪೩೪ ಅಭ್ಯರ್ಥಿಗಳು ನೋಂದಣಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವೃಂದ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ (ಆ. ೨) ಭಾನುವಾರ ಜಿಲ್ಲೆಯ ೬೧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು ೨೪೪೩೪ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪಾರದರ್ಶಕ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ವಿಜಯಪುರ ನಗರ-೫೫, ತಿಕೋಟಾ ನಗರ-೦೩ ಸೇರಿ ಒಟ್ಟು ೫೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದರೆ, ವಿಜಯಪುರ ಗ್ರಾಮೀಣ ಭಾಗದ ಕವಲಗಿಯಲ್ಲಿ ೨ ಹಾಗೂ ತಿಡಗುಂದಿಯಲ್ಲಿ ೧ ಸೇರಿದಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
೬೦ ಮಾರ್ಗಾಧಿಕಾರಿಗಳು: ನಕಲು ರಹಿತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ದೂರದೃಷ್ಟಿಯಿಂದ ಒಟ್ಟು ೨೦ ಮಾರ್ಗಗಳಿಗೆ ೬೦ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ೬೧ ವೀಕ್ಷಕರು, ೬೧ ಉಪ ಮುಖ್ಯ ಅಧೀಕ್ಷಕರು, ೬೧ ಜನ ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
೬೧ ವಸ್ತ್ರ ಸಂಹಿತೆ ಅಧಿಕಾರಿಗಳು: ಜೊತೆಗೆ ೬೧ ಜನರನ್ನುಳ್ಳ ವಿಶೇಷ ಜಾಗೃತ ದಳ ಸದಸ್ಯರನ್ನು ಪರೀಕ್ಷೆಗೆ ನಿಯೋಜಿಸಲಾಗಿದೆ. ೧೦ ಜನ ವೆಬ್ ಕ್ಯಾಸ್ಟಿಂಗ್ ವೀಕ್ಷಣಾ ತಂಡದ ಸದಸ್ಯರಿದ್ದಾರೆ. ೬೧ ವಸ್ತ್ರ ಸಂಹಿತೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
೨೪೪ ಸ್ವಯಂ ಸೇವಕರು ಹಾಗೂ ೬೧ ನೋಡಲ್ ಅಧಿಕಾರಿಗಳು, ೨೪೪ ಫ್ರಿಸ್ಕಿಂಗ್ ಸಿಬ್ಬಂದಿ, ೬೧ ಫ್ರಿಸ್ಕಿಂಗ್ ನೋಡಲ್ ಅಧಿಕಾರಿಗಳು, ೧೦೨೦ ಕೊಠಡಿ ಮೇಲ್ವಿಚಾಕರನ್ನು ಹಾಗೂ ೬೧ ಹೆಚ್ಚುವರಿ ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಅವಧಿಯುದ್ಧಕ್ಕೂ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಲಿದ್ದಾರೆ.
ವಸ್ತ್ರ ಸಂಹಿತೆ: ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಈ ಉಡುಪುಗಳನ್ನು ಧರಿಸಬಹುದು. ಆದರೆ ತಪಾಸಣೆಗೊಳಪಡಬೇಕು. ಪುರುಷ ವಿದ್ಯಾರ್ಥಿಗಳು ಜನಿವಾರ, ಶಿವದಾರ, ಲಿಂಗ, ಉಡದಾರ, ತಾಯಿತ, ರುದ್ರಾಕ್ಷಿ, ಕೈಕಟ್ಟುವ ಧಾರ್ಮಿಕ ಕ್ಷೇತ್ರದ ದಾರ ಧರಿಸಬಹುದಾದರೆ, ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸರ, ಕೈಬಳೆಗಳು, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ, ಹಣೆಬಟ್ಟು, ಉಂಗುರ ಧರಿಸಬಹುದಾಗಿದೆ.
ಕೆಲ ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಪರೀಕ್ಷಾ ಆರಂಭಕ್ಕೆ ೨:೩೦ ಗಂಟೆ ಮೊದಲು ಪರೀಕ್ಷಾ ಕೇಂದ್ರದ ವಸ್ತ್ರ ಸಂಹಿತೆ ಅಧಿಕಾರಿ ಮುಂದೆ ಹಾಜರಾಗಬೇಕು. ವಸ್ತ್ರ ಸಂಹಿತೆ ಅಧಿಕಾರಿ ಪ್ರತ್ಯೇಕ ಕೊಠಡಿಯಲ್ಲಿ ನಿಯಮಾನುಸಾರ ತಪಾಸಣೆಗೆ ಒಳಪಡಿಸಿದ ಬಳಿಕ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇವೆಲ್ಲ ಪರೀಕ್ಷೆಯಲ್ಲಿ ನಿಷೇಧ: ಎಲೆಕ್ಟ್ರಾನಿಕ್ ವಸ್ತುಗಳು : ಮೊಬೈಲ್ ಫೋನ್, ಬ್ಲ್ಯೂ ಟೂತ್, ಇಯರ್ ಫೋನಗಳು, ಮೈಕ್ರೋಪೋನ್, ಪೇಜಋ, ಮೈಕ್ರೊಚಿಪ್, ಕ್ಯಾಮೇರಾ, ಪೆನ್ ಡ್ರೈವ್‌ಗಳು, , ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್, ಕೈಗಡಿಯಾರ, ಸ್ಮಾರ್ಟ್ವಾಚ್, ಆಧುನಿಕ ಸಂವಹನ ಸಾಧನಗಳು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗಡೆ ಪರೀಕ್ಷಾರ್ಥಿಗಳು ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.
ಆಹಾರ, ಪಾನೀಯಗಳು: ತೆರೆದಿರುವ ಅಥವಾ ಯಾವುದೇ ಪ್ಯಾಕ್ ಮಾಡಲಾದ ಪದಾರ್ಥಗಳು, ನೀರಿನ ಬಾಟಲ್, ಪಾನೀಯ ಬಾಟಲ್ ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷಾರ್ಥಿಗಳು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ.
ಪಠ್ಯ ಸಾಮಗ್ರಿಗಳು ಬರೆದಿಟ್ಟುಕೊಂಡಿರುವ ಅಥವಾ ಪ್ರಿಂಟ್ ಇರುವ ಚೀಟಿಗಳು, ಪುಸ್ತಕಗಳು, ಜಾಮಿಟ್ರಿ ಬಾಕ್ಸ, ಪೇನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಎರೇಸರ್, ಲಾಗ ಟೇಬಲ್ ಇತ್ಯಾದಿ ಬರಹಗಳಿರುವ ವಸ್ತುಗಳು ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷಾರ್ಥಿಗಳು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ.
ಇತರೆ: ಶೂಗಳು, ಬೂಟ್ಸ್, ಕ್ಯಾಪ್, ಕಿವಿ, ತಲೆ ಮತ್ತು ಮುಖ ಮುಚ್ಚವಂತಹ ಯಾವುದೇ ಉಡುಪುಗಳು, ಬ್ಯಾಗ್, ಪರ್ಸು, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್‌ಗಳು ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷಾರ್ಥಿಗಳು ಧರಿಸಿ ಹೋಗಲು ಅವಕಾಶ ಇರುವುದಿಲ್ಲ.
ಅಕ್ರಮಕ್ಕೆ ಕಠಿಣ ಕ್ರಮ: ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಟಿ.ವ್ಹಿ ಕ್ಯಾಮೇರಾ, ವೆಬ್ ಕಾಸ್ಟಿಂಗ್ ಮೂಲಕ ನಿಗಾವಹಿಸಲಾಗುವುದು. ಪರೀಕ್ಷೆಯಲ್ಲಿ ಅಕ್ರಮ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಸುದ್ಧಿ ಹಾಗೂ ವಂಚನೆ ತಡೆಯಲು ಪೊಲೀಸ್ ಇಲಾಖೆಯು ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುತ್ತಿದೆ. ಜಿಲ್ಲೆ ಎಲ್ಲ ಕೋಚಿಂಗ್ ಸೆಂಟರ್ ಗಳ ಮೇಲೆ ಪೊಲೀಸ್ ಇಲಾಖೆಯ ಕಣ್ಗಾವಲು ಇದ್ದು, ಪರೀಕ್ಷಾ ದಿನದಂದು ಯಾವುದೇ ಕೋಚಿಂಗ್ ಸೆಂಟರ್ ತೆರೆಯುವಂತಿಲ್ಲ ಒಂದು ವೇಳೆ ಅಕ್ರಮ ಎಸಗಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
೨೦೦ ಮೀ. ಪ್ರದೇಶ ನಿಷೇಧ: ಪರೀಕ್ಷಾ ಕೇಂದ್ರವಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಯಾವುದೇ ಪಧಾಧಿಕಾರಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರೀಕ್ಷೆ ಮುಗಿಯುವವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೨೦೨೩ ರ ಕಲಂ ೧೬೩ ರ ಪ್ರಕಾರ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್ ಗಳು, ಸೈಬರ್ ಕೇಫೆಗಳು ಪರೀಕ್ಷೆ ನಡೆಯುವ ಅವಧಿಯಲ್ಲಿ ತೆರೆಯದಂತೆ ನಿಷೇಧಿಸಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
