ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿದ್ಯಾರ್ಥಿಗಳು ಶೈಕ್ಷಣಿಕ ಬದುಕನ್ನು ತಪಸ್ಸಿನಂತೆ ಕಳೆಯಬೇಕು. ಸ್ಪಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮ ಮಾಡಿದರೆ ಯಶಸ್ಸು ಸಹಜವಾಗಿ ಲಭಿಸುತ್ತದೆ ಎಂದು ಬೆಂಗಳೂರು ಕ್ರೋಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ. ವಿ.ಎಲ್.ಪಾಂಡುರಂಗ ಹೇಳಿದರು.
ಅವರು ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಶನಿವಾರ ಸಿದ್ದರಾಮೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಕಲ್ಪವೃಕ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ಮತ್ತು ಪ್ರಥಮ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಹಿಂದೆ ಪೋಷಕರ ಶ್ರಮ ಮತ್ತು ತ್ಯಾಗವಿರುವುದನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಶ್ರದ್ಧೆಯಿಂದ ಓದು–ಬರಹದಲ್ಲಿ ತೊಡಗಿದರೆ ಗುರಿ ತಲುಪುವುದು ಸಾಧ್ಯ. ಅವಕಾಶಗಳು ಎಲ್ಲರಿಗೂ ಸಿಗುತ್ತವೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸದಾನಂದ ಶರಣರು ಆಶೀರ್ವಚನ ನೀಡಿ, ಭಾರತವು ಶ್ರೇಷ್ಠ ಗುರುಪರಂಪರೆಯ ದೇಶವಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ಉಸಿರು ಕೊಡುತ್ತಾಳೆ, ತಂದೆ ಹೆಸರು ಕೊಡುತ್ತಾರೆ, ಆದರೆ ಸಮಾಜದಲ್ಲಿ ಅರ್ಥಪೂರ್ಣ ಬದುಕು ಕಟ್ಟಿಕೊಡುವವರು ಗುರುಗಳು ಎಂದು ಹೇಳಿದರು.
ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು, ಅಂಕಗಳಿಕೆಯಷ್ಟೇ ಅಲ್ಲ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥಾಪಕರು ಹಾಗೂ ಅಧ್ಯಕ್ಷ ಶಿವಶರಣಗೌಡ ವಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಡಾ. ದತ್ತಾತ್ರೇಯ ರೇ. ಮಳಖೇಡ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಸ್.ಎಚ್. ಧೂಳಬಾ ಹಾಗೂ ಡಾ. ವಿರೂಪಾಕ್ಷಪ್ಪ ಬಿರಾದಾರ ಉಪಸ್ಥಿತರಿದ್ದರು.
ಎಂ.ಸಿ. ಸಿಂದಗಿ ಅವರನ್ನು ಸನ್ಮಾನಿಸಲಾಯಿತು.
ಕಲ್ಪವೃಕ್ಷ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಭಾರತಿ ಚಿಕ್ಕಲಗಿ ಮತ್ತು ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಬಿ. ಸಿಂದಗಿ ವೇದಿಕೆಯಲ್ಲಿದ್ದರು.
ಕುಮಾರಿಪ್ರಿಯಾ ಬಿರಾದಾರ ಮತ್ತು ಅಂಕಿತಾ ಜಮಾದಾರ ಪ್ರಾರ್ಥನಾಗೀತೆ ಹಾಡಿದರು. ಭಾರತಿ ಚಿಕ್ಕಲಗಿ ಸ್ವಾಗತಿಸಿದರು .

