ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ಅನುಷ್ಠಾನವಾಗುತ್ತಿದ್ದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೊಕ್ಕೆ ಹಾಕಿದೆ.
ತೋಟಗಾರಿಕೆ ಬೆಳೆಗಳ ಉತ್ತೇಜನ ಮಳೆ ನೀರು ಸಂರಕ್ಷಣೆಗಾಗಿ ಕೃಷಿ ಹೊಂಡ ನಿರ್ಮಿಸಲು ಈ ಯೋಜನೆಯಡಿ ರೈತರಿಗೆ ಸಿಗುತ್ತಿದ್ದ ಸಬ್ಸಿಡಿ ಪ್ರಸಕ್ತ ಸಾಲಿನಿಂದ ನಿಲ್ಲಿಸಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ ೮೦ ಹಾಗೂಎಸ್ಸಿ ಎಸ್ಟಿ ವರ್ಗದ ರೈತರಿಗೆ ಶೇ ೯೦ ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಆದರೀಗ ಕೃಷಿ ಹೊಂಡ ನಿರ್ಮಾಣ ಕಾರ್ಯದ ಅಂಶವನ್ನೇ ಕೈಬಿಟ್ಟು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿರುವದು ಅನ್ನದಾತರ ಅಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ತಾಲೂಕಿನಲ್ಲಿ ೫ ಕ್ಕೂ ಹೆಚ್ಚು ಕೃಷಿ ಹೊಂಡಗಳು ಇದೇ ಯೋಜನೆಯಡಿ ನಿರ್ಮಾಣವಾಗಿವೆ. ಒಂದು ಕೃಷಿ ಕೊಂಡಕ್ಕೆ ೪ ಲಕ್ಷ ರೂ ವರೆಗೆ ಖರ್ಚಾಗಲಿದ್ದು ಕೇಂದ್ರ ಸರಕಾರ ಈ ಕೃಷಿ ಹೊಂಡಗಳಿಗೆ ಸಬ್ಸಿಡಿ ಕೊಡುತ್ತಿದ್ದರಿಂದ ರೈತರು ಮುಂದೆ ಬರುತ್ತಿದ್ದರು.
ತಾಲೂಕಾವಾರು ವಾರ್ಷಿಕ ಒಂದು ಕೋಟಿ ರೂ ವರೆಗೆ ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ಕೊಡಲಾಗುತ್ತಿತ್ತು. ಕೃಷಿ ಹೊಂಡ ನಿರ್ಮಾಣ ಕಾರ್ಯ ಮುಂದುವರೆಯುತ್ತದೆ ಎಂದುಕೊಂಡು ತಾಲೂಕಿನಲ್ಲಿ ಅಧಿಕಾರಿಗಳು ಈ ವರ್ಷವೂ ತೋಟಗಾರಿಕೆ ಬೆಳೆಗಾರರಿಗೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಹೇಳಿದ್ದಾರೆ. ರೈತರು ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು ಇದೀಗ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಬಿಲ್ ಗಾಗಿ ಅಲೆದಾಡುತ್ತಿದ್ದಾರೆ. ಆದರೆ ಕೃಷಿ ವಿಕಾಸ ಯೋಜನೆಯಡಿ ಹೊಂಡದ ನಿರ್ಮಾಣದ ಅಂಶವನ್ನೇ ತೆಗೆದಿರುವದರಿಂದ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈ ಕುರಿತಂತೆ ತಾಲೂಕಿನಾದಂತ ತೋಟಗಾರಿಕೆ ಇಲಾಖೆಯಡಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕೃಷಿ ವಿಕಾಸ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲು ರಾಜ್ಯ ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಈ ವರೆಗೆ ಅನುಮೋದನೆ ದೊರೆತಿಲ್ಲ ಎಂದು ತಿಳಿದಿಬಂದಿದೆ.
“ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಈ ವರೆಗೆ ಅನುದಾನ ಬಂದಿಲ್ಲ, ಅನುದಾನ ಬಂದರೆ ರೈತರಿಗೆ ನೀಡಲಾಗುತ್ತದೆ.”
– ಸತೀಶ ಬಡಿಗೇರ
ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಇಂಡಿ

