ಜಗ ಬೆಳಗಿದ ಜ್ಯೋತಿಯ ಜನ್ಮಸ್ಥಳ ಇಂಗಳೇಶ್ವರ ಇನ್ನೂ ಕತ್ತಲೆಯಲ್ಲಿ | ಸರ್ಕಾರದ ವಿರುದ್ಧ ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮವು ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಗ್ರಾಮವಾಗಿದ್ದು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಸರ್ಕಾರ ಕೂಡಲೇ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಹಾಗೂ ಬಸವಣ್ಣನವರ ವಂಶಸ್ಥರಾದ ಅರವಿಂದ ಕುಲಕರ್ಣಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶನಿವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗತ್ತಿಗೆ ಸಮಾನತೆ ಮತ್ತು ಮಾನವತೆಯ ಸಂದೇಶ ಸಾರಿದ ಬಸವಣ್ಣನವರ ಜನ್ಮಸ್ಥಳದಲ್ಲೇ ಅಭಿವೃದ್ಧಿಯ ಕೊರತೆ ಕಾಡುತ್ತಿದೆ ಎಂದು ಅರವಿಂದ ಕುಲಕರ್ಣಿ ವಿಷಾದ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಇದುವರೆಗೆ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರತಿದಿನ ಬಸವ ಜನ್ಮಸ್ಥಳ ವೀಕ್ಷಣೆಗೆ ಆಗಮಿಸುವ ನೂರಾರು ಭಕ್ತರು ಹಾಗೂ ಪ್ರವಾಸಿಗರು ಬಿಸಿಲು, ಮಳೆ, ಗಾಳಿ ನಡುವೆ ಬಯಲಿನಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಶೌಚಾಲಯದ ಇಲ್ಲದ ಕಾರಣ ಮಹಿಳೆಯರು ಮತ್ತು ವಯೋವೃದ್ಧರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರು ಮುಖಮುಚ್ಚಿಕೊಂಡು ಬಹಿರ್ದೆಸೆಗೆ ಹೋಗಬೇಕಾಗುತ್ತದೆ. ಬಸವ ಜನ್ಮ ಸ್ಥಳದಲ್ಲಿ ಇಂತಹ ದುಸ್ತಿತಿಯನ್ನು ಕಂಡು ಸರ್ಕಾರಕ್ಕಷ್ಟೇ ಅಲ್ಲ ಗ್ರಾಮಸ್ಥರಿಗೆ ಉಗಿದು ಹೋಗುತ್ತಿದ್ದಾರೆ. ಇದು ಇಂಗಳೇಶ್ವರ ಗ್ರಾಮದ ಜನತೆಗೆ ಅಪಮಾನವಾಗುತ್ತಿದೆ. ಕಾರಣ ಸರ್ಕಾರ ತಕ್ಷಣವೇ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ಗ್ರಾಮ ಹಿಂದುಳಿದಿದ್ದು, ಸರ್ಕಾರಿ ಶಾಲೆ ೧೦ನೇ ತರಗತಿವರೆಗೆ ಮಾತ್ರ ಇದೆ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಊರುಗಳಿಗೆ ತೆರಳಬೇಕಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆ ಇದ್ದರೂ ಹೆಚ್ಚಿನ ದೇಣಿಗೆ ನೀಡಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಗಳೇಶ್ವರ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕೆಂದು ಅವರು ಆಗ್ರಹಿಸಿದರು.
ಸುಮಾರು ೧೪ ರಿಂದ ೧೫ ಸಾವಿರ ಜನಸಂಖ್ಯೆ ಹೊಂದಿರುವ ಇಂಗಳೇಶ್ವರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ತುರ್ತು ಆರೋಗ್ಯ ಸಮಸ್ಯೆ ಎದುರಾದರೆ ಬಸವನ ಬಾಗೇವಾಡಿ ಅಥವಾ ವಿಜಯಪುರಕ್ಕೆ ತೆರಳಬೇಕಾಗಿದ್ದು, ಇದರಿಂದ ಅಮೂಲ್ಯ ಜೀವಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಬಸವನ ಬಾಗೇವಾಡಿ ಅಭಿವೃದ್ಧಿ ಮಂಡಳಿ ರಚಿಸಿ ಒಂದು ವರ್ಷ ಕಳೆದರೂ ಇದುವರೆಗೆ ಬಿಡಿಗಾಸು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಅವರು, ಇಂಗಳೇಶ್ವರ ಸೇರಿದಂತೆ ತಂಗಡಗಿ, ದೇವರ ಹಿಪ್ಪರಗಿ, ಮಸಬಿನಾಳ, ದೇಗಿನಾಳ ಸೇರಿದಂತೆ ಶರಣರ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇಂಗಳೇಶ್ವರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶಿವಾನಂದ ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಪರ ಹೋರಾಟಗಾರರಾದ ದತ್ತಾತ್ರೆಯ ಕುಲಕರ್ಣಿ, ನಾಗಪ್ಪ ಚಿಗರಿ, ಅಶೋಕ ಕುಲಕರ್ಣಿ, ರೇವಣಸಿದ್ದ ಐಗಳಿ, ಸೋಮು ದೇವೂರ, ಅವ್ವಪ್ಪ ಸಣ್ಣಿ, ಗಿರೀಶ ಕುಲಕರ್ಣಿ ಸೇರಿದಂತೆ ಹಲವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಂಚಲೋಹದ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಿ
ಈ ಸಂದರ್ಭದಲ್ಲಿ ಸಾಹಿತಿ ನಾಗಪ್ಪ ಚಿಗರಿ, ಕಲಾವಿದ ರೇವಣಸಿದ್ದ ಐಗಳಿ ಮಾತನಾಡಿ, ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿರುವ ಬಸವೇಶ್ವರರ ಸಿಮೆಂಟ್ ಪ್ರತಿಮೆ ಸಂಪೂರ್ಣ ಹಾಳಾಗಿದ್ದು, ಅದರ ಬದಲಿಗೆ ಸರ್ಕಾರ ಘೋಷಿಸಿರುವ ಪಂಚಲೋಹದ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪನೆ ನೆನಗುದಿಗೆ ಬಿದ್ದಿದ್ದು ಶೀಘ್ರ ಪುತ್ಥಳಿ ನಿರ್ಮಿಸಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಬಸವಣ್ಣನವರ ಜೀವನ ಚರಿತ್ರೆಗೆ ಸಂಬಂಧಿಸಿದ ಹಾಲಭಾವಿಯಿಂದ ಸ್ಮಾರಕದವರೆಗೆ ದ್ವಿಪಥ ರಸ್ತೆ ನಿರ್ಮಿಸಿ, ಡಿವೈಡರ್ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

