ತಿಕೋಟಾ ಬಿಎಲ್‌ಡಿಇ ನೂತನ ಕಲಾ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಬಿ.ಎಲ್. ಡಿ. ಇ ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಎಸ್.ತೋಳನೂರ ಅವರು ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದುವುದು ಇಂದಿನ ಅಗತ್ಯವಾಗಿದೆ. “ಆರೋಗ್ಯವೇ ಭಾಗ್ಯ” ಅನ್ನುವಂತೆ ಮನುಷ್ಯನಿಗೆ ಯಾವುದೇ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಅತ್ಯಂತ ಮಹತ್ವವನ್ನು ಪಡೆಯುತ್ತದೆ. ವಿದ್ಯಾರ್ಥಿಗಳಾದವರು ನಿತ್ಯವೂ ಪೌಷ್ಟಿಕಾಂಶ ಆಹಾರವನ್ನು ಸೇವಿಸುವುದರ ಮೂಲಕ ಆರೋಗ್ಯದ ಬಗ್ಗೆ ಸ್ವಯಂ ಜಾಗೃತರಾಗಿರುವುದು ಜೀವನ ಶೈಲಿಯ ಒಂದು ಉತ್ತಮ ಅಂಶವಾಗಿದೆ ಎಂದರು.
ಕಾರಣ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಐಕ್ಯೂಎಸಿ ಸಂಯೋಜಕ, ಪ್ರೊ.ಬಿ.ಎಸ್.ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿ,
ರಕ್ತಹೀನತೆ ತಡೆಗಟ್ಟಲು ನಿಮ್ಮ ದೈನಂದಿನ ಆಹಾರದಲ್ಲಿ ಕಬ್ಬಿಣಾಂಶ, ವಿಟಮಿನ್ ಬಿ12 ಮತ್ತು ಫೋಲಿಕ್ ಆಮ್ಲವಿರುವ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು.ಭಾರತದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, 15 ರಿಂದ 49 ವರ್ಷ ವಯಸ್ಸಿನ ಶೇಕಡಾ 57ರಷ್ಟು ಮಹಿಳೆಯರು, ಅದರಲ್ಲೂ 52.2% ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ ಕಂಡುಬಂದಿದೆ. ಶೇಕಡಾ 25ರಷ್ಟು ಪುರುಷರು ರಕ್ತಹೀನತೆಯಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಪ್ರೋಟೀನ್, ವಿಟಮಿನ್, ಕಬ್ಬಿಣಾಂಶಯುಕ್ತ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಮಾಡುವುದರ ಮೂಲಕ ರಕ್ತಹೀನತೆಯಿಂದ ದೂರ ಉಳಿಯುವಂತೆ ಕರೆ ನೀಡಿದರು.
ಆರೋಗ್ಯ ತಪಾಸಣಾ ಸಂಯೋಜಕ ಸಂಗು ಸಜ್ಜನ್ ಅವರು ರಕ್ತಹೀನತೆ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ತಿಳಿಸಿದರು. ನಂತರ 200 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆರೋಗ್ಯ ತಪಾಸಣೆ ಹೊಂದಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ, ಐಕ್ಯೂ ಎಸಿ ಸಂಯೋಜಕ ಪ್ರೊ.ಬಿ.ಎಸ್.ಬೆಳಗಲಿ, ಡಾ.ಎಸ್.ಎನ್.ವಾಘ್ಮೊರೆ, ವೈ.ಆರ್.ಸಿ ಸಂಯೋಜಕ, ಉಪನ್ಯಾಸಕ ಮಂಜುನಾಥ ಕಾಸೆ, ಶಿಬಿರದ ಸಂಯೋಜಕ ಸಂಗು ಸಜ್ಜನ್, ಆರೋಗ್ಯ ತಪಾಸಣಾ ಸಿಬ್ಬಂದಿ,
ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಡಾ.ಸಂತೋಷ ನವಲಗುಂದ ನಿರೂಪಿಸಿದರು, ಮಂಜುನಾಥ ಕಾಸೆ ವಂದಿಸಿದರು.

