ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಹಲೋ, ನನ್ನ ಪ್ರೀತಿಯ ಪ್ರೀತಿ
ಮೊದಲೇ ನೀನು ಮುಸ್ಸಂಜೆಯ ರವಿ ರಶ್ಮಿಯೊಳಗೆ ಮಿಂದೆದ್ದ ಬಂಗಾರ ವರ್ಣದ ಬಂಗಾರಿ. ಸಿಂಗಾರವಿಲ್ಲದ ಸಿಂಗಾರಿ. ಬಲು ಚೆಂದ ನಿನ್ನ ವೈಖರಿ. ಹೇಗೆ ವರ್ಣಿಸಲಿ ನಿನ್ನ ಸೌಂದರ್ಯದ ಸಿರಿ. ಕಾಣುವೆ ಸೌಂದರ್ಯದ ಸಾರವನ್ನೆಲ್ಲ ನಿನ್ನಲ್ಲಿ ಹಿಡಿದಿಟ್ಟುಕೊಂಡವಳಂತೆ. ಹರೆಯದ ಹೈಕಳೆಲ್ಲ ಮೊದಲ ನೋಟದಲ್ಲೇ ಒಲವಿನ ಬಲೆಯಲ್ಲಿ ಬೀಳುವಂತೆ ವೈಯ್ಯಾರ. ನಿನ್ನ ಸೋಜಿಗದ ಸೊಬಗು ಕಂಡು ನನ್ನ ತಲೆಯೊಳಗೊಂದು ಗಾಂಧಾರ ಲೋಕವರಳಿತು.. ನೀಲಿ ಕಂಗಳ ಮಿಟುಕಿಸಿ ಕಪ್ಪಾದ ಮುಂಗುರುಳ ಸರಿಸಿದಾಗ ನನ್ನ ಹರೆಯ ಮರುಹುಟ್ಟು ಪಡೆಯಿತು. ಕೆಂದಾವರೆ ಕೆನ್ನೆಯ ನಾಚಿಕೆಯ ಕೆಂಪು ತಂತು ಮನಕ್ಕೆ ತಂಪು. ನಿನ್ನ ಗುಳಿಕೆನ್ನೆ ದೃಷ್ಟಿಬೊಟ್ಟಿನಂತೆ. ಬಾನಾಡಿ ಗರಿಗೆದರಿ ಗಗನದೆಡೆ ನೋಡಿ ನಕ್ಕಂತೆ ನೀ ನನ್ನಡೆ ನೋಡಿ ನಕ್ಕೆ. ನನ್ನ ಹೃದಯದಲ್ಲಿ ಯಾರೂ ಬರೆಯದ ಒಲವಿನ ಚಿತ್ತಾರ ಬರೆದೆ. ಆ ಗಳಿಗೆಯಿಂದ ನನ್ನೀ ಮನ ಅಂದದ ಹೂವನು ಮೆಲ್ಲಗೆ ಸ್ಪರ್ಷಿಸಿ ಮಧು ಹೀರಿ ಸಂಭ್ರಮಿಸುವ ಭ್ರಮರದಂತೆ ಆಗಿದೆ.
ಮೊದಲ ಬಾರಿ ನಿನ್ನ ನೋಡಿದ್ದು ವಿಶ್ವವಿದ್ಯಾಲಯದ ವಾಚನಾಲಯದಲ್ಲಿ. ನೀನಲ್ಲಿ ಇರುವವರೆಗೆ ನನ್ನ ದೃಷ್ಟಿ ನಿನ್ನತ್ತ ನೆಟ್ಟಿತ್ತು. ಮನಸ್ಸು ನಿನ್ನ ಮಖದಲ್ಲಿದ್ದ ಮುಗ್ಧತೆಗೆ ಮಾರು ಹೋಗಿತ್ತು. ಆ ಬಟ್ಟಲು ಕಂಗಳಲ್ಲಿ ಅಳೆದು ತೂಗಿ ಲೆಕ್ಕ ಹಾಕುವ ಲೆಕ್ಕಾಚಾರದ ಗೆಳೆತನ ಮಾಡುವ ಯಾವ ಮುನ್ಸೂಚನೆಯೂ ಇರಲಿಲ್ಲ. ನಿನ್ನ ನೋಡುವ ಮುನ್ನ ನನ್ನ ಪ್ರಪಂಚ ತುಂಬಾ ಚಿಕ್ಕದಿತ್ತು. ಅಪ್ಪ, ಅವ್ವ, ಭವಿಷ್ಯದ ಬಗೆಗಿನ ಸುಂದರ ಕನಸುಗಳು, ಮತ್ತು ಓದು ಇಷ್ಟೇ. ನಿನ್ನೊಂದಿಗಿನ ಸಣ್ಣ ಸಣ್ಣ ಮಾತುಗಳು, ತರಗತಿಯ ನೋಟ್ಸ್ಗಳು. ಹುಟ್ಟುಹಬ್ಬದ ಶುಭಾಶಯಗಳು, ಪರೀಕ್ಷೆಯ ಚರ್ಚೆಗಳ ಮೂಲಕ ಗೆಳೆತನ ಬೆಳೆಯಿತು.
ಆ ಗೆಳೆತನ ನೋಡುನೋಡುವುದರಲ್ಲೇ ಸ್ನೇಹದ ರೇಖೆ ದಾಟಿತ್ತು. ಒಲವಿನ ಗಡಿಯಲ್ಲಿ ಬಂದು ನಿಂತಿತ್ತು ಮನಸ್ಸು. ಹೃದಯದೊಳಗೆ ಬೇರು ಬಿಟ್ಟಿದ್ದ ಇಷ್ಟು ದಿನ ಅಡಗಿಸಿಟ್ಟಿದ್ದ ಪ್ರೀತಿಯ ಮಾತನ್ನು ಹೇಳಲು ಮುಂದಾಗಿತ್ತು. ಧೈರ್ಯ ಮಾಡಿ ಒಂದು ಸಂಜೆ ಕಾಲೇಜಿನ ಆವರಣದಲ್ಲಿ ಹೇಳಿಯೇ ಬಿಟ್ಟೆ. ಆಗ ನೀನು ಸುಮ್ಮನೇ ಒಂದು ಸುಂದರ ನಗು ಚೆಲ್ಲಿ ಬೈ ಹೇಳಿ ಬೈಕ್ ಏರಿದ್ದೆ. ಹಲವು ತಿಂಗಳುಗಳು ಕಳೆದ ಮೇಲೆ ಮೊಬೈಲಿನಲ್ಲಿ ‘ಐಲವ್ಯೂ’ ಆದರೆ, ಜಾತಿ ಇಬ್ಬರ ಪ್ರೀತಿಯ ನುಂಗಿಬಿಡುವುದೇ? ಎನ್ನುವ ಹೆದರಿಕೆ ಕಾಡುತ್ತಿದೆ. ಎನ್ನುವ ಮೆಸೇಜು ನನಗಾಗಿ ಕಾದಿತ್ತು. ಪ್ರೀತಿ ಪ್ರೇಮ ಎಲ್ಲ ಓದು ಮುಗಿದ ಮೇಲೆ ಎಂಬ ಸಂದೇಶವೂ ಅದರ ಕೆಳಗೆ ಕುಳಿತಿತ್ತು. ಪ್ರೇಮ ದೇವತೆಯಂತಿರುವ ನೀನು ಕಾಲಿಟ್ಟಮೇಲೆ ನನ್ನ ಪ್ರಪಂಚ ವಿಶ್ವದಷ್ಟು ವಿಸ್ತಾರವಾಯಿತು.
ಅಂದು ಅರ್ಧ ರಾತ್ರಿ ಸರಿದರೂ ಕಣ್ರೆಪ್ಪೆಗಳು ಒಂದಕ್ಕೊಂದು ಅಪ್ಪಿಕೊಳ್ಳಲೇ ಇಲ್ಲ. ಕಂಗಳಲ್ಲಿ ನಿಧಾನವಾಗಿ ಕನಸುಗಳು ಒಂದಾದ ಮೇಲೊಂದು ಜಾರುತ್ತಿದ್ದವು. ಮೇಜಿನ ಮೇಲೆ ತೆರೆದಿಟ್ಟಿದ್ದ ಪುಸ್ತಕದ ಕೊನೆಯ ಪುಟದ ಮೇಲೆ ನಿನ್ನ ಹೆಸರನ್ನು ಮತ್ತೆ ಮತ್ತೆ ಬೆರಳುಗಳು ಬರೆಯತೊಡಗಿದವು. ಅಂತೂ ಇಂತೂ ನನ್ನ ಪ್ರೀತಿಯ ಹುಡುಗಿಯ ಎದೆಯಲ್ಲಿ ನನಗಾಗಿ ಪ್ರೀತಿಯಿದೆ ಎಂದು ತಿಳಿದ ಮೇಲೆ ಒಲವಿನ ಲೋಕ ಸಣ್ಣದಾಗಿ ತೆರೆದುಕೊಂಡಂತೆ ಅನಿಸಿತ್ತು. ಹೇಳದೆ ಕೇಳದೆ ಹೃದಯ ಆಗಲೇ ಪ್ರೀತಿಯೆಂಬ ಸುಂದರ ಲೋಕದಲ್ಲಿ ತೇಲಾಡಲು ಶುರು ಮಾಡಿತ್ತು.

ಜೀವನ ರೋಚಕ ತಿರುವು ಪಡೆದುಕೊಂಡಿದ್ದು ನಿನ್ನಿಂದಲೇ ಕಣೆ. ನೀನು ಸೌಂದರ್ಯದ ರಾಶಿ ಮಾತ್ರವಲ್ಲ ಕರುಣೆ, ಮಮತೆ, ಮಾನವತೆಯ ಸಾಗರ. ನಿನ್ನ ಸದ್ಗುಣಗಳು ನನಗೆ ಬಹಳ ಬಹಳ ಒಳ್ಳೆಯ ಸಂಗತಿಗಳನ್ನು ಕಲಿಸಿದ್ದವು. ಪ್ರೀತಿಗೆ ಜಾತಿಯ ಹಂಗಿಲ್ಲ ನಿಜ ಆದರೆ, ಪ್ರೀತಿಗೆ ನಂಬಿಕೆ ಬಲು ಮುಖ್ಯ ಎಂಬುದನ್ನು ಸಾರಿ ಸಾರಿ ಹೇಳಿದ್ದವು. ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವುದು ಅತಿ ಮುಖ್ಯ ಎಂಬ ಪಾಠ ಹೇಳಿಕೊಟ್ಟವು. ಪ್ರೀತಿ ಕೇವಲ ಎರಡು ಹೃದಯಗಳ, ಎರಡು ದೇಹಗಳ ಮಿಲನವಲ್ಲ. ಆದು ಅದರಾಚೆಗೆ ಅಗಾಧವಾಗಿ ವ್ಯಾಪಿಸಿದೆ. ಸಾಗರದಷ್ಟು ಆಳ. ಆಕಾಶದಷ್ಟು ಅಗಲ ಅನ್ನೋದು ನಿನ್ನಿಂದಲೇ ತಿಳಿದಿದ್ದೆ. ಪ್ರೀತಿ ಎರಡು ಕುಟುಂಬಗಳನ್ನು ಒಂದಾಗಿಸಬೇಕು. ಎಂಬ ಕಿವಿಮಾತು ಹೇಳಿದ್ದೆ. ಆಪ್ತ ಸಖಿಯಾಗಿದ್ದೆ. ಮನದರಸಿಯಾಗಿ ಮನದಲ್ಲಿ ಮನೆ ಮಾಡಿದ್ದೆ.
ಈ ಕಾಲದಲ್ಲಿ ಹಿಂದೆ ಮುಂದೆ ವಿಚಾರಿಸದೇ, ಹೆತ್ತವರ ಮನಸ್ಥಿತಿ ಅರ್ಥ ಮಾಡಿಕೊಳ್ಳದೇ, ಕ್ಷಣ ಸುಖಕ್ಕಾಗಿ ಪೂರ್ತಿ ಜೀವನ ಹಾಳು ಮಾಡಿಕೊಳ್ಳುತ್ತಿರುವ ಹುಡುಗ ಹುಡುಗಿಯರ ಹೆಚ್ಚುತ್ತಿದ್ದಾರೆ. ಮನೆಯವರ ಕಣ್ಣುಗಳ ತೇವಗೊಳಿಸದೇ ಹೃದಯಗಳನ್ನು ಪವಿತ್ರ ಪ್ರೇಮದ ಬಂಧನದಲ್ಲಿ ಬಂಧಿಸುವ ಬಗ್ಗೆ ಹೇಳಿದ ಮಾತುಗಳು ನಿನ್ನ ಪ್ರಬುದ್ಧತೆಯನ್ನು ಸಾರಿದ್ದವು. ಜೀವನ ಎಷ್ಟು ಅಮೂಲ್ಯ ಅದರಲ್ಲಿ ಗೊತ್ತಿಲ್ಲದೇ ಜಾರುವ ಈ ಯೌವ್ವನದ ಬಯಕೆಗಳು ಒಂದು ಭಾಗ ಎಂದೆಲ್ಲ ಹೇಳಿದ್ದವು. ‘ನನ್ನಲ್ಲಿರುವ ಬುದ್ಧಿವಂತಿಕೆ ಇಷ್ಟ. ಕಟ್ಟುಮಸ್ತಾದ ದೇಹದಾರ್ಡ್ಯತೆ ಬಗ್ಗೆ ನಿನಗೆ ಎಲ್ಲಿಲ್ಲದ ಆಕರ್ಷಣೆ.’ ಎಂದು ನೀ ಹೇಳಿದ ದಿನ ಆಕಾಶ ಮೂರೇ ಗೇಣು ಉಳಿದಿತ್ತು. ನೀ ಕಾಣದ ಸ್ವರ್ಗವನು ತೋರುವ ಆಸೆ ಮನದಲ್ಲಿ ಹೊಮ್ಮಿತ್ತು. ನೀನು ಪ್ರೇಮ ಗಂಗೆ. ನಿರಂತರವಾಗಿ ಪ್ರೇಮ ಜಲವನ್ನು ಹೊತ್ತು ಸಾಗುವವಳು. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಹೀಗೆ ಹತ್ತು ಹಲವು ಭಾವದೊಡಲಿನ ಭಾವಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುವ ಆ ಕ್ಷಣ ಯಾವಾಗ ಬರುವುದೆಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಈಗ ಕಾಯುವಿಕೆಗೆ ಪೂರ್ಣವಿರಾಮ ಇಡುವ ಸಮಯ ಸನ್ನಿಹಿತವಾಗಿದೆ. ನಿನ್ನ ನೆನಪಿನ ವಿನಃ ಮುಂಜಾನೆ ಆರಂಭವಾಗುವುದಿಲ್ಲ. ರಾತ್ರಿಗಳು ಕೊನೆಯಾಗುವುದಿಲ್ಲ. ನಿನ್ನ ಜೊತೆ ಕಳೆದ ಚೆಂದದ ನೆನಪುಗಳು ಕಾಡಿಸುತ್ತಲೇ ಇರುತ್ತವೆ.
ಅದರಲ್ಲೂ ಇಬ್ಬರ ಮನೆಯಲ್ಲಿ ಮದುವೆಗೆ ಹಸಿರು ನಿಶಾನೆ ಸಿಕ್ಕಮೇಲೆ ನೀ ಸಿಕ್ಕ ಕ್ಷಣ ವಿನೂತನ. ಮಳೆಗಾಲದ ಸಂಜೆಯದು ಮದುವೆಯ ನಿಶ್ಚಯದ ಸುದ್ದಿ ಹೇಳಲು ನನ್ನ ರೂಮಿಗೆ ಬಂದಿದ್ದೆ. ಹೊರಗೆ ಸಿಡಿಲು ಗುಡುಗಿನ ಸದ್ದಿದ್ದರೂ ಇಬ್ಬರ ನಡುವೆ ನಿಶಬ್ದ ಆವರಿಸಿತ್ತು. ಕೋಣೆಯ ತುಂಬ ಕೇವಲ ಉಸಿರಾಟದ ಸದ್ದು ಆವರಿಸಿತ್ತು. ಕಿಟಕಿಯಿಂದ ತೂರಿ ಬರುತ್ತಿದ್ದ ಗಾಳಿಗೆ ಹಾರುತ್ತಿದ್ದ ಮುಂಗುರಳಗಳು ನಿನ್ನೆ ಕೆನ್ನೆಯನ್ನು ಬಿಡದೇ ಮುತ್ತಿಕ್ಕಿವುದರಲ್ಲಿ ನಿರತವಾಗಿದ್ದವು. ಕೆನ್ನೆಯ ಮೇಲಿನ ನಾಚಿಕೆಯ ಕೆಂಪು ಮೆಲ್ಲನೆ ನಿನ್ನ ಹತ್ತಿರ ಸರಿಯುವಂತೆ ಮಾಡಿತ್ತು. ತಂಗಾಳಿಗೆ ನಡುಗುತ್ತಿದ್ದ ಕೈಬೆರಳುಗಳನ್ನು ನಿಧಾನವಾಗಿ ಹಸ್ತದೊಳಗೆ ತೆಗೆದುಕೊಂಡೆ. ಆಗ ಇಬ್ಬರ ಮೈಯಲ್ಲೂ ವಿದ್ಯುತ್ ಸಂಚಾರವಾಗಿತ್ತು. ನಿಧಾನವಾಗಿ ನನ್ನತ್ತ ಸರಿದಾಗ ತೋಳುಗಳು ಸದ್ದಿಲ್ಲದೇ ನಿನ್ನನ್ನು ಬಂಧಿಸಿದ್ದವು. ತೋಳತೆಕ್ಕೆಯಲ್ಲಿದ್ದಾಗ ಕಣ್ಣೆತ್ತಿ ನನ್ನ ಕಣ್ಣುಗಳನ್ನು ನೋಡುತ್ತ ಇಡೀ ಜನ್ಮ ಹೀಗೆ ಜೊತೆಯಾಗಿರುವ ಆಸೆಯ ಹೇಳುತ್ತ ಹಣೆಗೆ ಹೂಮುತ್ತನಿತ್ತೆ. ಅದರಲ್ಲಿ ಜೊತೆಯಾಗುವ ನಂಬಿಕೆಯ ಭಾವೋನ್ಮಾದ ಎದ್ದು ಕಾಣುತ್ತಿತ್ತು. ಹೂಮುತ್ತಿಗೆ ಪ್ರತಿಯಾಗಿ ನನ್ನ ಅಧರಗಳು ನಿನ್ನ ಕಣ್ಣು ಕೆನ್ನೆಗಳನ್ನು ಚುಂಬಿಸಿದ್ದವು. ನಾವೇನೂ ಕಡಿಮೆ ಇಲ್ಲವೆಂಬಂತೆ ನಿನ್ನ ಅಧರಗಳು ಸ್ಪರ್ಧೆಗಿಳಿದವು. ಹನಿಹನಿ ಮಳೆಯೂ ನಮ್ಮಿಬ್ಬರ ಪ್ರೇಮಕ್ಕೆ ಸಂಗೀತ ನುಡಿಸಿದಂತೆ ಭಾಸವಾಗಿತ್ತು. ಆ ಕ್ಷಣದಲ್ಲಿ ಇಬ್ಬರ ಹೃದಯದ ಬಡಿತ ಒಂದೇ ತಾಳಕ್ಕೆ ಮಿಡಿಯುತ್ತಿತ್ತು.
ಆ ನೆನಪು ನೆನೆದಾಗಲೊಮ್ಮೆ ಮೈಯನ್ನು ಮನಸ್ಸನ್ನು ಬೆಚ್ಚಗಾಗಿಸುತ್ತದೆ. ನನ್ನೆದೆಯ ಆಳದಲ್ಲಿ ತುಂಟಾಟದ ಬುಗ್ಗೆಯನ್ನು ಚಿಮ್ಮಿಸುತ್ತದೆ. ಆ ಮಧುರ ಭಾವ ಮತ್ತಷ್ಟು ಮಗದಷ್ಟು ಬಯಕೆಗಳ ಮುಂದೆ ಚೆಲ್ಲುತ್ತದೆ. ಪ್ರೀತಿಯ ಮುಂದಿನ ಸಂಚಿಕೆ ಯಾವಾಗ ಎಂದು ನಗುತ್ತ ಕೇಳುತ್ತಿದೆ. ಇನ್ನು ಜೀವನವೆಲ್ಲ ಪ್ರತಿ ಇರುಳು ಪ್ರಥಮ ಇರುಳು ಪ್ರತಿದಿನವೂ ಪ್ರೀತಿಯ ಹೊಸ ಹೊಸ ಸಂಚಿಕೆಗಳ ಸಾಲು ಮುಂದುವರಿಸಲು ಬಂದುಬಿಡು ಕಾಯುತಿರುವೆ ಪ್ರೇಮ ಮಂಚದ ಮೇಲೆ ಹೂ ಚೆಲ್ಲಿ.
ಇಂತಿ ನಿನ್ನ ಪ್ರೀತಿಯ
ಪ್ರೇಮ್
(ಪ್ರೇಮಶೇಖರ)


