ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
“ಓ ಗೆಳೆಯ, ಜೀವದ ಗೆಳೆಯ, ನಿಂಗೆ ಶಾನೆ ಕ್ವಾಪ ಕಣೋ, ಕ್ಚಾಪಕೂ ಒಂದು ಕೈ ಪ್ರೀತಿ ಜಸ್ತಿ ಕಣೋ.. ಕುಚುಕು ಕುಚುಕು, ನೀನು ಚಡ್ಡಿ ದೋಸ್ತ ಕಣೋ ಕುಚುಕು, ಜೀವ ದಿನಾದಾಸ್ತಿ ಕಣೋ ಕುಚುಕು.. ಎಂಬ ಚಲನಚಿತ್ರದ ಹಾಡುಗಳನ್ನು ಕೇಳಿರಬಹುದು. ಇದರಿಂದ ಪ್ರತಿಯೊಬ್ಬರಿಗೆ ತಮ್ಮ ಹೃದಯದ ಭಾವನೆಗಳನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ನಾವು ಮಾಡುವ ತಪ್ಪುಗಳನ್ನು ತಿದ್ದಿ-ತೀಡಿ, ಕನಸುಗಳನ್ನು ಸಾಕಾರಗೊಳಿಸಲು ಮತ್ತು ಪ್ರತಿಯೊಂದು ಸಾಧನೆಯ ಹಿಂದೆ ಪ್ರೊತ್ಸಾಹಕನಾಗಿ ನಿಂತಿರುವವನೇ ಗೆಳೆಯ ಅಥವಾ ಸ್ನೇಹಿತ. ಆದ್ದರಿಂದ ಪ್ರತಿಯೊಬ್ಬರು ಇಡೀ ಜಗತ್ತನೇ ಗೆದ್ದಿರುವ ಎಲ್ಲ ಸಂಬಂಧಗಳನ್ನು ಮೀರಿ ನಿಂತಿರುವ ಮತ್ತು ಬಾಂಧವ್ಯ ಬೆಸೆಯುವ ಸುಮಧುರ ಸಂಬಂಧವೇ ಗೆಳೆತನ ಎಂದು ಹೇಳಬಹುದು.
ಅದಕ್ಕಾಗಿ ಸ್ನೇಹಿತರ ದಿನ ಎಂದರೆ ಕೇವಲ ಕೈಗೆ ಪ್ರೆಂಡ್ ಶಿಫ್ ಬ್ಯಾಂಡ್ ಕಟ್ಟುವುದು, ಗಿಫ್ಟ ನೀಡುವುದು, ಪಾರ್ಟಿ, ಮೋಜು-ಮಸ್ತಿ ಮಾಡಿ ಕೇಕ್ ಕತ್ತಸುವುದಲ್ಲ. ಬದಲಾಗಿ ನಿಜವಾಗಿ ಸ್ನೇಹಿತನ ಮನದ ಇಂಗಿತವನ್ನು ಅರಿತು ಬಿದ್ದಾಗ ಮೇಲೇಳುವಂತೆ ಬೆನ್ನು ತಟ್ಟಿ, ಸದಾ ಪ್ರೇರಣೆ ನೀಡುವ ಅಮರ ಪ್ರೇಮ ಸ್ನೇಹತ್ವದ ಸಂಕೇತವಾಗಬೇಕು ಮತ್ತು ಅರ್ಥಪೂರ್ಣವಾಗಬೇಕು. ಭಾರತದಲ್ಲಿ ಪ್ರತಿವರ್ಷ ಅಗಷ್ಟ ತಿಂಗಳ ಮೊದಲ ರವಿವಾರದಂದು (ಅಗಷ್ಟ ೨) ವಿಶ್ವ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ಸ್ನೇಹವು ಪ್ರೀತಿ-ನಂಬಿಕೆಯ ಪ್ರತಿರೂಪವಾಗಬೇಕು:
ವಿಶ್ವದಲ್ಲಿ ಸ್ನೇಹದೆಲ್ಲೆಡೆ ಸ್ನೇಹತ್ವ ಮತ್ತು ಅದರ ಪ್ರಾಮುಖ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಮೊಟ್ಟಮೊದಲು ಜುಲೈ ೩೦, ೧೯೫೮ ರಲ್ಲಿ ವರ್ಲ್ಡ ಫ್ರೆಂಡಶಿಫ್ ಕ್ರುಸೇಡ್‌ನಿಂದ ಈ ದಿನಾಚರಣೆಯ ಪ್ರಸ್ತಾಪಿಸಲಾಯಿತು. ಮುಂದೆ ೨೦೧೧ ರಲ್ಲಿ ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಸ್ನೇಹತ್ವ ದಿನವನ್ನು ಆಚರಿಸುವಂತೆ ಉತ್ತೇಜಿಸಿತು. ಗೆಳೆಯರ ಮಧ್ಯೆ ಶಾಂತಿ, ಪ್ರೀತಿ ಮತ್ತು ಪರಸ್ಪರ ನಂಬಿಕೆಯನ್ನು ಬೆಳೆಸುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ಯಾವುದೇ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ಗಡಿಗಳನ್ನು ಮೀರಿ ನಿಲ್ಲುವ ಶಕ್ತಿ ಸ್ನೇಹಕ್ಕಿದೆ. ಈ ದಿನವು ಜಗತ್ತಿನಲ್ಲಿ ಶಾಂತಿ ನೆಲೆಸಲು ಸ್ನೇಹ ಮತ್ತು ಸಹೋದರತೆಯು ಅತ್ಯಗತ್ಯ ಎಂಬ ಸಂದೇಶವನ್ನು ಸಾರುತ್ತದೆ.

ಕಷ್ಟ-ಸುಖದಲ್ಲಿ ಸಹಭಾಗಿ ಮತ್ತು ಆಪದ್ಭಾಂಧವನಾಗುವ ಸ್ನೇಹಿತನಂತಿರಬೇಕು:
ಸ್ನೇಹ ಮಾಡುವ ಮೊದಲು ಒಳ್ಳೆಯವರು ಕೆಟ್ಟವರು ಯಾರೆಂಬುದನ್ನು ಪರೀಕ್ಷಿಸಿ, ಒಳ್ಳೆಯ ಸಚ್ಚಾರಿತ್ರ್ಯ, ಸನ್ನಡತೆ, ಸದ್ಭಾವ, ಸಮಚಿತ್ತ ಮತ್ತು ಸದ್ವಿಚಾರದಂತಹ ಗುಣಗಳನ್ನು ಹೊಂದಿದ ಸ್ನೇಹಿತರ ಜೊತೆ ಸ್ನೇಹತ್ವ ಬೆಳೆಸಬೇಕು. ಸ್ನೇಹಿತರೆಂದರೆ ಕಷ್ಟ-ಸುಖಗಳಲ್ಲಿ ಸಹಭಾಗಿಯಾಗಿ ಸದಾ ನಮ್ಮ ಶ್ರೇಯಸ್ಸು ಬಯಸುವ ಮತ್ತು ಬಡವ-ಬಲ್ಲಿದರೆನ್ನದೇ ತನ್ನ ಗೆಳೆಯನನ್ನು ಪ್ರೀತಿಸುವ, ಪ್ರೊತ್ಸಾಹಿಸುವ, ಆಪದ್ಭಾಂಧವನಾಗಿ ಸಹಾಯಹಸ್ತ ಚಾಚುವವನೇ ನಿಜವಾದ ಸ್ನೇಹಿತನಾಗುತ್ತಾನೆ.
ಸ್ನೇಹವೆಂದರೆ ಮರೆಯಲಾಗದ ಅನುಬಂಧ
ಸ್ನೇಹಿತರೆಂದರೆ ಕಷ್ಟಕಾಲದಲ್ಲಿ ಕುಟುಂಬದವರು, ಬಂಧು-ಬಳಗದವರು ಸಹಾಯಕ್ಕೆ ಬಾರದಿದ್ದರೂ ನಿಜವಾದ ಸ್ನೇಹಿತರು ನಮ್ಮೊಂದಿಗಿರುತ್ತಾರೆ. ಜೀವನದಲ್ಲಿ ಕುಗ್ಗಿದಾಗ ಭರವಸೆಯ ಬೆಳಕಾಗುತ್ತಾರೆ. ಸ್ನೇಹವು ರಕ್ತ ಸಂಬಂಧಕ್ಕಿಂತಲೂ ಮೀರಿ ಬೆಸೆಯುವ ಬಂಧ. ಸ್ನೇಹಿತರು ನಮ್ಮ ಜೀವನವನ್ನು ನಗು, ಸಂತೋಷ ಮತ್ತು ಮರೆಯಲಾಗದ ಸವಿ ನೆನಪುಗಳನ್ನು ತುಂಬುತ್ತಾರೆ. ನಾವು ಸ್ನೇಹಿತರೊಂದಿಗೆ ಕಳೆದ ಬಾಲ್ಯದ, ಶಾಲಾ-ಕಾಲೇಜಿನ ದಿನಗಳನ್ನು ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಒಗ್ಗಟ್ಟಿನಿಂದ ಇರಬೇಕು. ದುರದೃಷ್ಟವಶಾತ್ ಇಂದು ಮೋಬೈಲ್, ವ್ಯಾಟ್ಸಪ್, ಫೇಸಬುಕ್ ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸ್ನೇಹತ್ವದ ಬಾಂಧವ್ಯವು ಕೇವಲ ಕಾಟಾಚಾರಕ್ಕೆ ಹಾಯ್-ಬಾಯ್‌ಗೆ ಮಾತ್ರ ಸೀಮೀತವಾಗುತ್ತಿರುವದು ಕಳವಳಕಾರಿ ಸಂಗತಿ.
೨೦೨೬ ನೇಯ ವರ್ಷದ ಘೋಷವಾಕ್ಯ
“ಸ್ನೇಹದ ಮೂಲಕ ಶಾಂತಿ ಮತ್ತು ಐಕ್ಯಮತ್ಯವನ್ನು ಉತ್ತೇಜಿಸುವುದು” ಈ ವರ್ಷದ ಧ್ಯೇಯವಾಕ್ಯವಾಗಿದೆ. ಆದ್ದರಿಂದ ಈ ಸ್ನೇಹ ದಿನದ ಕಲ್ಪನೆಯು ಸಮಾಜವನ್ನು ದ್ವೇಷ ಮತ್ತು ದೇಷದ ಸಂಕೋಲೆಯಿಂದ ಮುಕ್ತಗೊಳಿಸುವ ಪ್ರಬಲ ಉಪಕ್ರಮವೆಂದು ಪರಿಗಣಿಸಲಾಗಿದೆ. ಪರಾಕ್ರಮಿ ಅರ್ಜುನ ಮತ್ತು ಬಡಪಾಯಿ ಕುಚೇಲ ಇಬ್ಬರನ್ನೂ ಸಮನಾಗಿ ಆದರಿಸಿದ ಜಗತ್ತಿನ ಪ್ರಪ್ರಥಮ ಗೆಳೆಯ ಭಗವಾನ್ ಶ್ರೀಕೃಷ್ಣನ ಸ್ನೇಹತ್ವವು ನಮಗೆಲ್ಲ ಆದರ್ಶವಾಗಲಿ. ನಮ್ಮಲ್ಲಿ ಯಾವುದೇ ಜಾತಿ, ಮತ, ಪಂಥ, ಧರ್ಮ ಮತ್ತು ಜನಾಂಗವೆಂಬ ಭಾವ ತೊರೆದು ಎಲ್ಲರೊಂದಿಗೆ ಸ್ನೇಹತ್ವದಿಂದ ಬದುಕುವಂತಾಗಬೇಕು ಅಂದಾಗ ಮಾತ್ರ ಈ ವಿಶ್ವ ಸ್ನೇಹಿತ್ವ ದಿನದ ಆಚರಣೆ ನಿಜಕ್ಕೂ ಅರ್ಥಪೂರ್ಣವಾಗುವುದು.


