ಶಿಕ್ಷಣ ಉದ್ಯೋಗವಲ್ಲ, ಸೇವೆಯೆಂದು ಭಾವಿಸಿ ಬಾಳು ಬೆಳಗಿದ ಗುರು | ಬಿ.ಎಲ್.ಡಿ.ಇ. ವೈದ್ಯಕೀಯ ಆಸ್ಪತ್ರೆಗೆ ದೇಹದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಅಕ್ಷರಸಂತ
ಉದಯರಶ್ಮಿ ದಿನಪತ್ರಿಕೆ
ವರದಿ: ಮಹಾಂತೇಶ ನೂಲಾನವರ
ಸಿಂದಗಿ: ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ. ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿ. ಅಂತಹ ಶಿಲ್ಪಿಗಳಲ್ಲಿ ಅಪರೂಪದ ವ್ಯಕ್ತಿತ್ವವಾಗಿದ್ದವರು ವಿಜಯಪುರ ಜಿಲ್ಲೆಯ ಸಿಂದಗಿಯ ಹಿರಿಯ ಶಿಕ್ಷಕ, ಗಣಿತ ತಜ್ಞ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ. ಶಿಕ್ಷಣವನ್ನು ಉದ್ಯೋಗವೆಂದು ಎಂದಿಗೂ ಭಾವಿಸದೆ, ಅದನ್ನು ಸಮಾಜ ಸೇವೆಯಾಗಿ ಸ್ವೀಕರಿಸಿ ತಮ್ಮ ಇಡೀ ಬದುಕನ್ನೇ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಮರ್ಪಿಸಿದ್ದ ಈ ಮಹಾಗುರು ಇಂದು ಕೊನೆಯುಸಿರೆಳೆದಿರುವುದು ಸಿಂದಗಿಯ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಎಚ್.ಟಿ. ಕುಲಕರ್ಣಿ ಸರ್ ಎಂದರೆ ಶಿಸ್ತು, ಸರಳತೆ, ಸಮಯಪಾಲನೆ ಮತ್ತು ಗುಣಮಟ್ಟದ ಶಿಕ್ಷಣದ ಪ್ರತೀಕ. ಗಣಿತ ವಿಷಯವನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವ ಅವರ ವಿಶಿಷ್ಟ ಶೈಲಿ ಸಾವಿರಾರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. “ಗಣಿತ ಕಷ್ಟವಲ್ಲ, ಅರ್ಥ ಮಾಡಿಕೊಂಡರೆ ಅತ್ಯಂತ ಸುಲಭ” ಎಂಬ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ ಅವರು, ಅನೇಕ ವಿದ್ಯಾರ್ಥಿಗಳನ್ನು ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದರು.
ತಮ್ಮ ಟ್ಯೂಷನ್ ತರಗತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ನೆರವಾಗಿ ಶಿಕ್ಷಣದ ಬೆಳಕು ತಲುಪಿಸುವ ಕಾರ್ಯವನ್ನು ಜೀವನಪರ್ಯಂತ ಮುಂದುವರಿಸಿದರು. ಅವರಿಗೆ ಶಿಕ್ಷಣ ಎಂದರೆ ಉದ್ಯೋಗವಲ್ಲ. ಅದು ಸಮಾಜದ ಋಣ ತೀರಿಸುವ ಪವಿತ್ರ ಸೇವೆಯಾಗಿತ್ತು. ಅವರ ಬದುಕಿನ ಕೊನೆಯ ಕ್ಷಣವೂ ಸಮಾಜಮುಖಿಯಾಗಿಯೇ ಉಳಿಯಿತು. ಜೀವಿತಾವಧಿಯಲ್ಲಿಯೇ ತಮ್ಮ ದೇಹವನ್ನು ಬಿ.ಎಲ್.ಡಿ.ಇ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ದಾನ ಮಾಡುವ ಸಂಕಲ್ಪ ಮಾಡಿಕೊಂಡಿದ್ದ ಅವರು, ನಿಧನದ ನಂತರವೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ತಮ್ಮ ದೇಹವನ್ನು ಅರ್ಪಿಸುವ ಮೂಲಕ ಮಾನವೀಯತೆಯ ಅತ್ಯುನ್ನತ ಆದರ್ಶವನ್ನು ಮೆರೆದಿದ್ದಾರೆ.
ಎಚ್.ಟಿ. ಕುಲಕರ್ಣಿ ಸರ್ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಹಳೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾಳು ಬೆಳಗಿದ ಗುರು
ಶಿಷ್ಯರ ಸಂಪಾದನೆಯಲ್ಲಿ, ಶಿಷ್ಯರೆಲ್ಲರೂ ಬರೆದ ನುಡಿ ನಮನ ಸಲ್ಲಿಸಿದ ಲೇಖನಗಳನ್ನು ಒಳಗೊಂಡ ಬಾಳು ಬೆಳಗಿದ ಗುರು ಗ್ರಂಥವು 2015ರಲ್ಲಿ 1977 ರಿಂದ 2015ರ ವರೆಗಿನ ಅವರ ಬಳಿ ಕಲಿತ 4ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ವೃಂದ ಗುರುವಂದನಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಹಳೆಯ ವಿದ್ಯಾರ್ಥಿ ಬಳಗ ಅವರಿಗೆ ನಾಣ್ಯ ತುಲಾಭಾರ ನೆರವೇರಿಸಿದ ನೆನೆಪು ಇಲ್ಲಿ ನೆನೆಯಬಹುದು.
“ಸಿಂದಗಿಯಲ್ಲಿ ಶಿಕ್ಷಣ ಕ್ರಾಂತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ತಮ್ಮ ಇಡೀ ಜೀವನವನ್ನು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮುಡುಪಾಗಿಟ್ಟ ನೆಚ್ಚಿನ ಗುರುಗಳಾದ ಶ್ರೀ ಎಚ್.ಟಿ. ಕುಲಕರ್ಣಿ ಸರ್ ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡಿದ ಅವರು ತಮ್ಮ ಸೇವೆ, ಸರಳತೆ ಹಾಗೂ ಬದ್ಧತೆಯಿಂದ ಸದಾ ಸ್ಮರಣೀಯರಾಗಿರುತ್ತಾರೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

“ಸಿಂದಗಿಯ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಶಿಕ್ಷಣವನ್ನು ಸೇವೆಯಾಗಿ ಬದುಕಿದ ನನ್ನ ನೆಚ್ಚಿನ ಗುರುಗಳಾದ ಎಚ್.ಟಿ. ಕುಲಕರ್ಣಿ ಅವರ ನಿಧನದ ಸುದ್ದಿ ನಂಬಲಿಕ್ಕೇ ಆಗುತ್ತಿಲ್ಲ.ಅವರ ಅಗಲಿಕೆಯು ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಸಾವಿರಾರು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.”
– ಅರುಣ ಶಹಾಪುರ
ಮಾಜಿ ವಿಪ ಸದಸ್ಯರು
ಕೋಟ್ ೩
“ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಆದರ್ಶ ಶಿಕ್ಷಕರಾದ ಶ್ರೀ ಎಚ್.ಟಿ. ಕುಲಕರ್ಣಿ ಅವರು ಸರಳತೆಯ ಸಾಕಾರಮೂರ್ತಿಯಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಶಿಕ್ಷಣ ದಾಸೋಹಗೈಯುತ್ತಲೇ ಸಮಾಜವನ್ನು ಶ್ರೀಮಂತಗೊಳಿಸಿದವರು. ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಚಿರಸ್ಮರಣೀಯರು.”
– ಇಂದುಶೇಖರ ಮಣೂರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ
ಕೋಟ್ ೪
“ನಿವೃತ್ತಿ ಎಂಬುದು ಅವರ ಬದುಕಿನಲ್ಲಿ ಇರಲಿಲ್ಲ. ಕೊನೆಯ ಉಸಿರಿನವರೆಗೂ ಅಕ್ಷರ ಸೇವೆಯನ್ನೇ ಜೀವನದ ಧ್ಯೇಯವಾಗಿಸಿಕೊಂಡಿದ್ದರು. ಮಾನವೀಯ ಕಾಳಜಿಯಿಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ನೀಡಿ ಅವರ ಬದುಕಿಗೆ ಬೆಳಕಾದರು.”
– ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ

