ಉದ್ಯಮಿ ಸಾತವೀರ ರೊಟ್ಟಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರದಿಂದ ಸೈಕಲ್ ಯಾತ್ರೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಸೈನ್ಸ್ ಫಾರ್ ಫ್ಯೂಚರ್’ (Science for Future) ಎಂಬ ಸಂದೇಶದೊಂದಿಗೆ ಬೆಳಗಾವಿ ಜಿಲ್ಲೆಯ ಅಥಣಿ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಸಾತವೀರ ರೊಟ್ಟಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ.
ಕಾಶ್ಮೀರದ ಕಾಟ್ರಾದಿಂದ ಆರಂಭಗೊಂಡ ಈ ಸೈಕಲ್ ಯಾತ್ರೆ 25 ದಿನಗಳನ್ನು ಪೂರೈಸಿದೆ. 24ನೇ ದಿನದಂದು ಬೆಂಗಳೂರಿಗೆ ಆಗಮಿಸಿದ ತಂಡವು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ಪುನಃ ಕನ್ಯಾಕುಮಾರಿಯತ್ತ ಸಾತವೀರ ರೊಟ್ಟಿ ಹಾಗೂ ಪುತ್ರರಾದ ವಿನಯ ಮತ್ತು ಸುಮಂತ ಅವರು ತೆರಳುವ ಸಮಯದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರ ಪರವಾಗಿ ಯಾತ್ರಿಗಳನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸೈಕಲ್ ಯಾತ್ರೆಗೆ ಶುಭ ಕೋರಿ ಮಾತನಾಡಿದ ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ. ಅವರು, ಇಂದಿನ ಯುವಜನತೆ ದೈನಂದಿನ ಕಾರ್ಯದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಅವರು ದೈಹಿಕ ಹಾಗೂ ಮಾನಸಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಯುವಜನತೆಗೆ ಆರೋಗ್ಯದತ್ತ ಪ್ರೇರಣೆ ನೀಡುವ ಉದ್ದೇಶದಿಂದ ಬೆಂಗಳೂರಿನ ಉದ್ಯಮಿ ಸಾತವೀರ ರೊಟ್ಟಿ ಅವರು ತಮ್ಮ ಪುತ್ರರಾದ ವಿನಯ ಮತ್ತು ಸುಮಂತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ತುಳಿಯುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ ಎಂದು ಹೇಳಿದರು.
ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಅವರು ಮಾತನಾಡಿ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಸೈಕಲ್ ತುಳಿದು ಆರೋಗ್ಯ ರಕ್ಷಣೆ ಮಾಡುವುದರ ಜೊತೆಗೆ ಪರಿಸರ, ಸಾಮಾಜಿಕ ಕ್ಷೇತ್ರ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಾಮಾಜಿಕ ಕೆಲಸದಲ್ಲಿ ತೊಡಗಿದೆ. ಆರು ವರ್ಷಗಳ ಹಿಂದೆ 5ಕಿಮೀ ಸೈಕಲ್ ತುಳಿಯಲು ತೊಂದರೆ ಅನುಭವಿಸುತ್ತಿದ್ದ ಹಾಗೂ ಒತ್ತಡ ಜೀವನ ಶೈಲಿ ಹೊಂದಿದ್ದ ಸಾತವೀರ ರೊಟ್ಟಿ ಅವರು ತಮ್ಮ ಮಕ್ಕಳೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡಿರುವುದು ಸಾಹಸಮಯ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸುಭಾಷ ಹೂಗಾರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಹಣಮಂತ ಚಿಂಚಲಿ, ಸಿದ್ದರಾಜು ಜಮಖಂಡಿ, ಅನಿಲ ಪಾಟೀಲ, ನಿವೃತ್ತ ಡಿಸಿಪಿ ಮೋಘಿ, ಕಿರಣ ಬೆಟಗೇರಿ, ಸೋಮಶೇಖರ ಪಾಟೀಲ, ಅಬ್ದುಲ ಖಾದರ, ವಿಜಯ ಸೋನವಾಲ್ಕರ ಸೇರಿದಂತೆ ಮತ್ತಿತರು ಇದ್ದರು.

