ಅಥಣಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ಥಳೀಯ ಎಸ್.ಎಸ್.ಎಂ.ಎಸ್. ಕಾಲೇಜಿನ ಖೋತ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ತಾಲೂಕು ಅಧ್ಯಕ್ಷ ರಾಕೇಶ್ ಮೈಗೂರ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುವ ನಾಯಕ ಚಿದಾನಂದ ಸವದಿ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ನಡುವೆಯೂ ಪತ್ರಿಕೆಗಳು ಸಮಾಜದ ವಿಶ್ವಾಸವನ್ನು ಉಳಿಸಿಕೊಂಡಿವೆ. ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಪಕ್ಷಾತೀತವಾಗಿ ಸತ್ಯವನ್ನು ಸಮಾಜದ ಮುಂದೆ ತರುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಿದ್ದಾರೆ ಎಂದು ಹೇಳಿದರು.
ಪತ್ರಕರ್ತರು ಯಾವುದೇ ಖಚಿತ ಸಂಭಾವನೆ ಇಲ್ಲದಿದ್ದರೂ ತಮ್ಮ ಸ್ವಂತ ವೆಚ್ಚದಲ್ಲಿ ಸ್ಥಳಕ್ಕೆ ತೆರಳಿ ಸುದ್ದಿಗಳನ್ನು ಸಂಗ್ರಹಿಸಿ ಜನತೆಗೆ ತಲುಪಿಸುತ್ತಿದ್ದಾರೆ. ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಯೋಗಕ್ಷೇಮ ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಮಾತನಾಡಿ, ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸುವಲ್ಲಿ ಹಾಗೂ ಸಮಾಜದಲ್ಲಿ ಸುಧಾರಣೆ ತರಲು ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ಸಂದೇಶಗಳನ್ನು ತಲುಪಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿದ್ದವು. ಡಿಜಿಟಲ್ ಮಾಧ್ಯಮಗಳಲ್ಲಿ ತ್ವರಿತ ಮಾಹಿತಿ ದೊರೆಯುತ್ತಿದ್ದರೂ, ಸಮಗ್ರ ಮತ್ತು ನೈಜ ಸುದ್ದಿಗಳು ಪತ್ರಿಕೆಗಳಲ್ಲಿಯೇ ಲಭ್ಯವಾಗುತ್ತವೆ ಎಂದು ಹೇಳಿದರು.
ಆರ್ಥಿಕ ಸಂಕಷ್ಟದಲ್ಲಿರುವ ಪತ್ರಕರ್ತರ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪತ್ರಿಕಾ ರಂಗಕ್ಕೂ ವಿಶೇಷ ಪ್ರಾಮುಖ್ಯತೆ ನೀಡಿ, ವಾರ್ಷಿಕ ಬಜೆಟ್‌ನಲ್ಲಿ ಕನಿಷ್ಠ ಶೇ.1ರಷ್ಟು ಅನುದಾನ ಮೀಸಲಿಡುವಂತೆ ಅವರು ಆಗ್ರಹಿಸಿದರು.
ಗಜಾನನ ಮಂಗಸೂಳಿ ಮಾತನಾಡಿ, ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತಂದು ಆಡಳಿತದ ಗಮನ ಸೆಳೆಯುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅಧಿಕೃತ ಪತ್ರಕರ್ತರಿಗೆ ನಿವೇಶನ ಸೇರಿದಂತೆ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕೆಂದು ಒತ್ತಾಯಿಸಿದರು.
ಹಿರಿಯ ಸಹಾಯಕ ಸಂಪಾದಕರು ದೀ.ಹಿಂದೂ ಪತ್ರಿಕೆ ಬೆಳಗಾವಿ ರಿಸಿಕೇಶ ಬಹಾದ್ದುರ ದೇಸಾಯಿ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗಚ್ಚಿನ ಮಠದ ಮ.ನಿ.ಪ್ರ. ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಸಿದ್ರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ ಮುನ್ನೊಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂಆರ್.ಮುಂಜಿ,ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಿರಮಲಪ್ಪ ಉಪ್ಪಾರ, ಗಿರೀಶ ಬೂಟಾಳಿ, ಶ್ರೀಮತಿ ಡಾ.ಸ್ಮಿತಾ ಚೌಗಲಾ ಡಾ. ಮಲ್ಲಿಕಾರ್ಜುನ ಹಂಜಿ, ಡಾ. ಮಹೇಶ್ ಕಾಪ್ಸೆ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೇಷ್ಮಾ ಇನಾಮದಾರ, ಬಸವರಾಜ್ ಚಾಮಕೇರಿ, ಮೈನುದ್ದೀನ್ ಡೊಂಗರಗಾಂವ, ಶಬ್ಬೀರ್ ಸಾತಬಚ್ಚೆ , ಸುಂದರ ಸೌದಾಗರ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು

