ಗೆದ್ದರೂ ‘ಕೈ’ಗೆ ಸಿಗದ ಪಟ್ಟ, ಕಮಲ-ತೆನೆಗೆ ಸರಳ ಬಹುಮತ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆಯ ಎ ತರಗತಿಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಹೈಕೋರ್ಟ್ ಆದೇಶದ ಮೇರೆಗೆ ಫಲಿತಾಂಶ ಪ್ರಕಟಿಗೊಂಡಿದ್ದು, ನಾಲ್ಕೂ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಗುರುವಾರ ಚುನಾವಣೆ ಅಧಿಕಾರಿಯಾದ ತಹಸಿಲ್ದಾರ್ ಶ್ರೀನಿವಾಸ್, ರೇಣುಕಾ ಅವರು ಫಲಿತಾಂಶ ಪ್ರಕಟಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸೋಮೇಶ್ ಜಿಯಾರ 11 , ರಾಜನಾಯಕ ಜಿನ್ನಹಳ್ಳಿ 11 , ಶಿವನಂಜಮ್ಮ 11 ಹಾಗೂ ಮಹದೇವಪ್ಪ 10 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜುಲೈ 26ರಂದು ನಡೆದ 12 ಸ್ಥಾನಗಳ ಚುನಾವಣೆಯಲ್ಲಿ ಬಿ ತರಗತಿಯ 8 ಸ್ಥಾನಗಳ ಫಲಿತಾಂಶವನ್ನು ಅಂದೇ ಪ್ರಕಟಿಸಗೊಳಿಸಲಾಗಿತ್ತು. ಆದರೆ ಎ ತರಗತಿಯ ಚುನಾವಣೆಯಲ್ಲಿ ಕೆಲ ಗೊಂದಲ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಮತದಾನ ನಡೆದರೂ ಫಲಿತಾಂಶ ಪ್ರಕಟಗೊಳಿಸಿರಲಿಲ್ಲ. ಆದರೆ ವಿಚಾರಣೆ ನಡೆಸಿ ಹೈಕೋರ್ಟ್ ಆದೇಶ ಹಿನ್ನೆಲೆ ಚುನಾವಣಾಧಿಕಾರಿಯಾದ ತಹಸೀಲ್ದಾರ್ ಶ್ರೀನಿವಾಸ್ ಫಲಿತಾಂಶ ಪ್ರಕಟಗೊಳಿಸಿ, ವಿಜೇತ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದರು.
ಬಿ ತರಗತಿಯ 8 ಸ್ಥಾನಗಳಲ್ಲೂ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆ ತರಗತಿಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತ್ತು. ಆದರೆ ಎ ತರಗತಿಯ ನಾಲ್ಕು ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ, ಶಾಸಕ ಅನಿಲ್ ಚಿಕ್ಕಮಾದುಗೆ ಕೊಂಚ ನಿಟ್ಟುಸಿರುವ ಬಿಡುವಂತೆ ಮಾಡಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಎದುರಿಸಿದ ಮೊದಲ ಚುನಾವಣೆ ಟಿಎಪಿಸಿಎಂಎಸ್ ಆಗಿದ್ದು, ಅಧಿಕಾರ ಹಿಡಿಯಲು ಸಜ್ಜಾಗಿದೆ.
ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್, ಚುನಾವಣಾಧಿಕಾರಿ ರೇಣುಕಾ, ವಿಜೇತ ಅಭ್ಯರ್ಥಿಗಳಾದ ಸೋಮೇಶ್ ಜಿಯಾರ, ರಾಜನಾಯಕ ಜಿನ್ನಹಳ್ಳಿ, ಶಿವನಂಜಮ್ಮ, ಮಹದೇವಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ಕಾರ್ಯದರ್ಶಿ ಲಿಂಗರಾಜು ಉಪಸ್ಥಿತರಿದ್ದರು.
ಕಮಲ-ತೆನೆ ತೆಕ್ಕೆಗೆ ಟಿಎಪಿಸಿಎಂಎಸ್?
ಟಿಎಪಿಸಿಎಂಎಸ್ ಯಲ್ಲಿ ಒಟ್ಟು 15 ಸದಸ್ಯರ ಸಂಖ್ಯಾಬಲವಿದ್ದು, ಅಧ್ಯಕ್ಷ ಸ್ಥಾನ ಪಡೆಯಲು 8 ಸದಸ್ಯರ ಅವಶ್ಯಕತೆಯಿದೆ. ಬಿ ತರಗತಿಯಲ್ಲಿ 8 ಕ್ಕೆ 8 ಸ್ಥಾನಗಳಲ್ಲೂ ಗೆದ್ದಿರುವ ಬಿಜೆಪಿ-ಜೆಡಿಎಸ್ ಸುಲಭವಾಗಿ ಅಧಿಕಾರ ಚುಕ್ಕಾಣಿ ಹಿಡಿಯಬಹುದಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಗೆ ಆಪರೇಷನ್ ಕಾಂಗ್ರೆಸ್ ಭೀತಿ ಕಾಡುತ್ತಿದ್ದು, ಅಲ್ಲಿಯವರೆಗೆ ವಿಜೇತರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿದೆ.

