ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ನಿಂಬೆಹಣ್ಣು ಮಾರಾಟ ವ್ಯವಸ್ಥೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು, ಇಂಡಿ ಭಾಗದಲ್ಲೂ ಎಪಿಎಂಸಿ ಮುಖಾಂತರವೇ ಅಧಿಕೃತ ವ್ಯಾಪಾರ ನಡೆಯಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಇರುವಂತೆ, ಇಂಡಿ ತಾಲೂಕಿನಲ್ಲೂ ತಕ್ಷಣವೇ ಇಂತಹದ್ದೇ ಪಾರದರ್ಶಕ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಿಂಬೆಹಣ್ಣು ವ್ಯಾಪಾರಕ್ಕೆ ಸಂಬಂಧಿಸಿದಂತೆ ಸದ್ಯ ಎರಡು ರೀತಿಯ ಭಿನ್ನ ಚಿತ್ರಣಗಳು ಕಂಡುಬರುತ್ತಿವೆ. ವಿಜಯಪುರ ನಗರದ ಎಪಿಎಂಸಿ ಆವರಣದಲ್ಲಿಯೇ ನಿಂಬೆಹಣ್ಣು ಮಾರಾಟ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತದೆ. ಇಲ್ಲಿ ಮುಕ್ತ ಹರಾಜು ಪ್ರಕ್ರಿಯೆ ಇರುವುದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ ಆದರೆ, ಅತಿ ಹೆಚ್ಚು ನಿಂಬೆಹಣ್ಣು ಬೆಳೆಯುವ ಇಂಡಿ ಭಾಗದಲ್ಲಿ ಇಂತಹ ಯಾವುದೇ ಸರ್ಕಾರಿ ನಿಯಂತ್ರಿತ ವ್ಯವಸ್ಥೆ ಇಲ್ಲ. ಇದರಿಂದಾಗಿ ರೈತರು ಪ್ರತಿ ಹಂತದಲ್ಲೂ ಶೋಷಣೆಗೆ ಒಳಗಾಗುತ್ತಿದ್ದಾರೆ.
ತಾಲೂಕಿನಲ್ಲಿ ಅಧಿಕೃತ ಎಪಿಎಂಸಿ ಮಾರುಕಟ್ಟೆ ಸಕ್ರಿಯವಾಗಿಲ್ಲದೇ ಇರುವುದನ್ನು ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು, ತಮ್ಮದೇ ಆದ ದಲ್ಲಾಳಿ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡಿದ್ದಾರೆ. ಮಧ್ಯವರ್ತಿಗಳು ರೈತರಿಂದ ನೇರವಾಗಿ ಮತ್ತು ತಮಗೆ ಇಷ್ಟಬಂದ ದರಕ್ಕೆ ನಿಂಬೆಹಣ್ಣು ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾರುಕಟ್ಟೆಯ ನೈಜ ದರದ ಮಾಹಿತಿ ಇಲ್ಲದೆ, ರೈತರು ದಲ್ಲಾಳಿಗಳು ನಿಗದಿಪಡಿಸಿದ ಅತ್ಯಲ್ಪ ಬೆಲೆಗೇ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಬೇಕಾದ ಅನಿವಾರ್ಯತೆ ಇದೆ.
ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ ನಿಂಬೆಹಣ್ಣನ್ನು ಈ ಮಧ್ಯವರ್ತಿಗಳು ಹೊರರಾಜ್ಯ ಹಾಗೂ ಕರಾವಳಿ ಭಾಗಗಳಿಗೆ ನೇರವಾಗಿ ಸರಬರಾಜು ಮಾಡಿ ತಾವೇ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರ ಬೆವರಿನ ಹನಿಗೆ ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸಿರುವ ಶಂಕರಗೌಡ ಪಾಟೀಲ ಅವರು ಸರ್ಕಾರ ಮತ್ತು ಕೃಷಿ ಮಾರಾಟ ಮಂಡಳಿಗೆ ಮನವಿ ಮಾಡಿ ಇಂಡಿಯಲ್ಲಿ ತಕ್ಷಣವೇ ಇಂಡಿ ಎಪಿಎಂಸಿ ಆವರಣದಲ್ಲಿ ನಿಂಬೆಹಣ್ಣು ಖರೀದಿಗೆ ಪ್ರತ್ಯೇಕ ಮತ್ತು ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು, ಎಪಿಎಂಸಿ ಆವರಣದ ಹೊರಗೆ ನಡೆಯುವ ಅನಧಿಕೃತ, ರಹಸ್ಯ ಖರೀದಿ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ಘೋಷಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ವಿಜಯಪುರ ಮಾದರಿಯಲ್ಲೇ ಇಂಡಿಯಲ್ಲೂ ಮುಕ್ತ ತೂಕ ಮತ್ತು ಬಹಿರಂಗ ಹರಾಜು ಪ್ರಕ್ರಿಯೆ ಆರಂಭಿಸಬೇಕು. ಇದರಿಂದ ರೈತರಿಗೆ ಸೂಕ್ತ ತೂಕ ಮತ್ತು ನ್ಯಾಯಯುತ ಬೆಲೆ ಸಿಗುತ್ತದೆ ಎಂದು ಶಂಕರಗೌಡರು ತಿಳಿಸಿದರು.

