ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೆಂದರೆ ಗುರುಗಳು. ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವ, ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಪ್ರಾಚಾರ್ಯ ಡಾ. ರಾಜಾಗೌಡ ಕಾಗವಾಡೆ ಹೇಳಿದರು.
ನಗರದ ಬಿ.ಎಲ್.ಡಿ.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುವ ತಂದೆ-ತಾಯಿ, ಬಂಧು-ಬಳಗ, ನೆರೆಹೊರೆಯವರು ಹಾಗೂ ಸಮಾಜದ ಹಿರಿಯರೂ ನಮ್ಮ ಗುರುಗಳೇ. ಇಂತಹ ಗುರುಗಳ ಮಾರ್ಗದರ್ಶನವೇ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ” ಎಂದು ಹೇಳಿದರು.
ಗುರು-ಶಿಷ್ಯ ಪರಂಪರೆಯು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಅದರ ಮಹತ್ವ ಕಡಿಮೆಯಾಗಿಲ್ಲ. ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ವಿಜಯಲಕ್ಷ್ಮಿ ಯಾದವಾಡ, ರವಿ ಗುಗ್ರಿ, ದುಂಡಪ್ಪ ಡಬರಿ ಹಾಗೂ ಅಲ್ಲಮಪ್ರಭು ವಾಜಂತ್ರಿ ಗುರುಗಳ ಕುರಿತು ತಮ್ಮ ಅನುಭವ, ಕೃತಜ್ಞತೆ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಗುರು-ಶಿಷ್ಯರ ಬಾಂಧವ್ಯ, ಶಿಕ್ಷಣದ ಮಹತ್ವ ಹಾಗೂ ಜೀವನ ಮೌಲ್ಯಗಳ ಕುರಿತು ನಡೆದ ವಿಚಾರ ವಿನಿಮಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಮಧು ಮಠಪತಿ ಮತ್ತು ಶ್ವೇತ ಗುಜಗೊಂಡ ಪ್ರಾರ್ಥಿಸಿದರು. ಶ್ರೇಯಾ ಚೌಹಾಣ್ ಸ್ವಾಗತಿಸಿದರು. ರಂಜಾನ್ ಪಿಂಜಾರ್ ಹಾಗೂ ಸೃಷ್ಟಿ ಸಿಂಧೂರ ಕಾರ್ಯಕ್ರಮ ನಿರೂಪಿಸಿದರು. ಮಹಾನಂದ ತೇಲಿ ವಂದನಾರ್ಪಣೆ ಸಲ್ಲಿಸಿದರು.
“ಜ್ಞಾನ ನೀಡುವ ಗುರುಗಳು ಸಮಾಜದ ನಿಜವಾದ ಶಿಲ್ಪಿಗಳು; ಅವರ ಮಾರ್ಗದರ್ಶನದಲ್ಲೇ ಸದೃಢ ರಾಷ್ಟ್ರ ಮತ್ತು ಆದರ್ಶ ಸಮಾಜ ನಿರ್ಮಾಣ ಸಾಧ್ಯ” ಎಂಬ ಸಂದೇಶದೊಂದಿಗೆ ಗುರು ಪೂರ್ಣಿಮಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

