ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಾಗತಿಕ ಮಟ್ಟದ ಕೈಗಾರಿಕೆ ದೈತ್ಯ ಡಿ.ಎನ್. ಸಲ್ಯೂಷನ್ಸ್ ರಾಜ್ಯದಲ್ಲಿ ಆಗಸ್ಟ್ 26ರಿಂದ ಕಾರ್ಯಾರಂಭ ಮಾಡುತ್ತಿದ್ದು, ಮೊದಲ ಹಂತದಲ್ಲಿ 400 ಎಂಜಿನಿಯರ್ ಗಳಿಗೆ ಉದ್ಯೋಗ ನೀಡಲಿದೆ. ಇದರಲ್ಲಿ ವಿಜಯಪುರ ನಗರದ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ 8 ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಹೆಮ್ಮೆಯ ವಿಷಯವಾಗಿದೆ. ಈಗ ಉದ್ಯೋಗ ಪಡೆದ ಒಟ್ಟು 400 ಯುವಕರಲ್ಲಿ ಉತ್ತರ ಕರ್ನಾಟಕದ 117 ಜನರಿಗೆ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ನಂ.1 ಮತ್ತು ವಿಶ್ವದ 3ನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆ ಇದಾಗಿದೆ. ಈ ವರ್ಷದ ಫೆಬ್ರವರಿಯಿಂದ ಕರ್ನಾಟಕದಲ್ಲಿ ತನ್ನ ಮಹತ್ವಾಕಾಂಕ್ಷಿ ಉತ್ಪಾದನೆ ಘಟಕದ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು ಆಗಸ್ಟ್ 26ಕ್ಕೆ ಉದ್ಘಾಟನೆ ನಡೆಯಲಿದೆ.
ದೇವನಹಳ್ಳಿಯ ಐಟಿಐಆರ್ ಸಮೀಪ ಸುಮಾರು ₹1,000 ಕೋಟಿ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಈ ಘಟಕಕ್ಕೆ 10 ಎಕರೆ ಜಮೀನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರಕ್ಕೆ ಬಂದ ಹೂಡಿಕೆಗಳು ಕಾಗದಗಳ ಮೇಲೆ ಉಳಿಯದೆ, ಅನುಷ್ಠಾನಗೊಳ್ಳುತ್ತ ಉದ್ಯೋಗಗಳನ್ನು ಸೃಷ್ಟಿಸಿ ನಮ್ಮ ಯುವ ಸಮೂಹದ ಭವಿಷ್ಯವನ್ನು ರೂಪಿಸುತ್ತಿವೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಮಧ್ಯೆ ಡಿ.ಎನ್. ಸಲ್ಯೂಷನ್ಸ್ ನ ಭಾರತ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯಂಗ್ಸಾಮ್ ಕಿಮ್ ಮತ್ತು ಅವರ ತಂಡದ ಸದಸ್ಯರು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಆಗಷ್ಟ್ 26ರಂದು ನಡೆಯಲಿರುವ ಘಟಕದ ನಿರ್ಮಾಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

