ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶಿವಶರಣ ಹಡಪದ ಅಪ್ಪಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶವನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಅನುಸರಿಸಿದ್ದರು. ಕ್ಷೌರ ವೃತ್ತಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಾ ಪ್ರತಿಯೊಂದು ಕಾಯಕವು ಪವಿತ್ರ ಎಂಬ ಸಂದೇಶವನ್ನು ಸಾರಿದರು ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ ಅವರು ಉದ್ಘಾಟಿಸಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಧಶ್ರದ್ಧೆ, ಅಸಮಾನತೆ ಹಾಗೂ ಅಜ್ಞಾನವನ್ನು ಖಂಡಿಸಿದರು. “ಬಸವಪ್ರಿಯ ಕೂಡಲಚನ್ನಸಂಗಮದೇವ” ಎಂಬ ಅಂಕಿತನಾಮದಿಂದ ಅವರು ಅನೇಕ ಅರ್ಥಪೂರ್ಣ ವಚನಗಳನ್ನು ರಚಿಸಿದ್ದಾರೆ. ಅವರ ಜೀವನ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎನ್.ಕೆ. ನದಾಫ್, ಗ್ರಾಮ ಆಡಳಿತಾಧಿಕಾರಿ ಬಿ.ಎನ್. ಜಿಡ್ಡಿಮನಿ, ಆನಂದ ಇಂಡಿ ಉಪಸ್ಥಿತರಿದ್ದರು.
ಸಮಾಜದ ಮುಖಂಡರಾದ ಲಕ್ಷ್ಮಣ ಸು. ಹಡಪದ, ಮಲ್ಲಪ್ಪ ಹಡಪದ, ಯಲ್ಲಪ್ಪ ಹಡಪದ, ಮಂಜು ಹಡಪದ, ಅರ್ಜುನ್ ಹಡಪದ, ಕಾಂತು ಹಡಪದ (ಪತ್ರಕರ್ತರು), ಬಸವ ಹಡಪದ, ಪುಂಡಲೀಕ ಹಡಪದ, ಭೀಮಸಿ ಹಡಪದ, ಈರಪ್ಪ ಹಡಪದ, ಕಲಮೇಶ ಹಡಪದ, ಹಂಪಣ್ಣ ಹಡಪದ, ಪರಶುರಾಮ ಹಡಪದ, ಹಣಮಂತ ಹಡಪದ, ಶಿವು ಹಡಪದ, ಇಸು ಹಡಪದ ಹಾಗೂ ನಾಗಪ್ಪ ಹಡಪದ ಸೇರಿದಂತೆ ಹಲವರು ಭಾಗವಹಿಸಿದ್ದರು.

