ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ವೀರಭಟಕರ ಜಲಾಶಯದಿಂದ ೪೦ ಸಾವಿರ ಕ್ಯೂಸೆಕ್ ಮತ್ತು ಉಜನಿ ಜಲಾಶಯದಿಂದ ೨೫ ಕ್ಯೂಸೆಕ್ ಹೀಗೆ ಒಟ್ಟು ೬೫ ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟçದ ವೀರಭಟಕರ ಜಲಾಶಯ ಮತ್ತು ಭೀಮಾ ನದಿಯ ಪಾತ್ರದಲ್ಲಿ ಮಳೆಯು ಹೆಚ್ಚಾಗುತ್ತಿದ್ದು ಜಲಾಶಯ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ನೀರನ್ನು ಹರಿಯ ಬಿಡಲಾಗಿದೆ. ನೀರಾ ನದಿಯ ವೀರಭಟಕರ ಜಲಾಶಯದಿಂದ ಮತ್ತು ಭೀಮಾ ನದಿಯ ಉಜನಿ ಜಲಾಶಯದಿಂದ ಮಳೆಯಿಂದ ಹೆಚ್ಚಾದ ನೀರನ್ನು ಮಹಾರಾಷ್ಟçದ ಪಂಡರಪೂರ ಹತ್ತಿರದ ಸಂಗಮದಲ್ಲಿ ಸೇರಿ ಅಲ್ಲಿಂದ ಪಂಡರಪೂರ ಮಾರ್ಗವಾಗಿ ಕರ್ನಾಟಕದಲ್ಲಿರುವ ನದಿ ಪಾತ್ರಕ್ಕೆ ನದಿಯ ಮೂಲಕ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಗೆ ಬಿಟ್ಟಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಕೋರಿದ್ದಾರೆ.
ಬಹುತೇಕ ಇಂಡಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಭೀಮೆಯಲ್ಲಿ ನೀರು ಹರಿಯುತ್ತಿದೆ. ಎಂದು ಗುರುಸ್ವಾಮಿಯವರು ತಿಳಿಸಿದ್ದಾರೆ.
ಈ ಮಧ್ಯೆ ತಹಸೀಲ್ದಾರ ನಾಂಗೇಂದ್ರ ಕೋಳಶೆಟ್ಟಿಯವರು ಮತ್ತು ತಾ.ಪಂ ಇಒ ಮಹಾದೇವಪ್ಪ ಏವೂರ ಪ್ರತಿ ಗ್ರಾ.ಪಂ ದವರಿಗೆ ಗ್ರಾಮದಲ್ಲಿ ಡಂಗುರ ಸಾರಲು ತಿಳಿಸಿದ್ದು ನದಿ ತೀರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸಲಹೆ ನೀಡುತ್ತಿದ್ದಾರೆ ಎಂದು ಕಂದಾಯ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

