ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಲ್ಲಾ ಸಮುದಾಯದ ಕುರಿತು ರಾಜ್ಯ ಬಿಜೆಪಿ ಧುರೀಣ ಸಿ.ಟಿ. ರವಿ ಅವಹೇಳನಕಾರಿ ಹಾಗೂ ಅಗೌರವದ ಪದಗಳನ್ನು ಬಳಸಿ ಮಾತನಾಡಿರುವುದನ್ನು ಖಂಡಿಸಿ, ಅವರ ವಿರುದ್ಧ ಪ್ರತಿಭಟನೆ ಕೈಗೊಂಡು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಮುಂದೆ ಮಂಗಳವಾರ ಸಭೆ ಸೇರಿ ಪ್ರತಿಭಟನೆ ಕೈಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಧುರೀಣ ಮುನೀರ್ ಅಹ್ಮದ್ ಮಳಖೇಡ ಮಾತನಾಡಿ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳುಮಾಡುತ್ತವೆ. ಸಾರ್ವಜನಿಕ ಜೀವನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಎ.ಡಿ.ಮುಲ್ಲಾ, ಇಮ್ತಿಯಾಜ್ ಮುಲ್ಲಾ ಮಾತನಾಡಿ, ಮುಸ್ಲಿಮ್ ಸಮುದಾಯ ವೈವಿಧ್ಯಮಯವಾಗಿದ್ದು ಇದರಲ್ಲಿ ಮುಲ್ಲಾ, ಸೈಯದ್,ಶೇಖ್, ಪಠಾಣ, ಪಿಂಜಾರ, ಬೇರಿ ಸಹಿತ ಹಲವು ಪಂಗಡಗಳಿವೆ. ಇವುಗಳನ್ನು ತಿಳಿಯದೇ ಕೇವಲ ಇಡೀ ಸಮುದಾಯದ ಕುರಿತು ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣ ಪಂಚಾಯತಿ ಮಾಜಿಅಧ್ಯಕ್ಷ ಭಾಸ್ಕರ್ ಗುಡಿಮನಿ, ಹೈದರಸಾಬ್ ಮುಲ್ಲಾ, ಇಕ್ಬಾಲ್ ಬಿಜಾಪುರ, ಶಬ್ಬೀರ್ ಮುಲ್ಲಾ, ಜಬ್ಬಾರ್ ಚೌದ್ರಿ, ಸಮೀರ್ ಮಕಾಂದಾರ್, ಸೈಫನ್ ಮುಲ್ಲಾ, ಬುಡ್ಡೆಸಾಬ್ ಮುಲ್ಲಾ, ದಾವಲ್‌ಸಾಬ್ ಗಂಗೂರ್, ಇಸ್ಮಾಯಿಲ್ ಮುಲ್ಲಾ(ಮೆಸ್ತಿç), ಮಿಯಾಜ್ ಯಲಗಾರ ಸಹಿತ ಇತರರು ಇದ್ದರು

