ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜು.೩೦ ಗುರುವಾರದಿಂದ ಮೂರು ದಿನಗಳ ಕಾಲ ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಮತಾಬಷಹೀದ ಜಾತ್ರಾ ಮಹೋತ್ಸವ (ಉರುಸು)ನಡೆಯಲಿದೆ.
ದಿನಾಂಕ ೩೦ ರಂದು ಗುರುವಾರ ಜಾತ್ರಾ ಮಹೋತ್ಸವದ ಅಂಗವಾಗಿ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದ್ದು, ಪ್ರಥಮ ೨೦೦೦೧ ರೂ, ೧೦೦೦೧ ದ್ವಿತೀಯ,೧೫೦೦೧ ರೂ. ತೃತೀಯ ಬಹುಮಾನ ೧೦೦೦೧ ನೀಡಲಾಗುವುದು. ರಾತ್ರಿ ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಕಾಸೀವiಪಟೇಲ ಪೊಲೀಸ್ ಪಾಟೀಲ ಇವರಿಂದ ಧಾರ್ಮಿಕ ಕ್ರೀಯಾಚರಣೆಗಳಿಂದ ಸ್ಥಳೀಯ ಸಧ್ಭಕ್ತ, ಸರ್ವ ಸಮುದಾಯದೊಡನೆ ಗಂಧೋತ್ಸವ ನಡೆಯಲಿದೆ. ಅಂದೇ ರಾತ್ರಿ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗುವುದು. ರಾತ್ರಿ “ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು” ಎಂಬ ಸಾಮಾಜಿಕ ನಾಟಕ ಜರುಗಲಿದೆ
ದಿ:೩೧ ಶುಕ್ರವಾರದಂದು ದೀಪೋತ್ಸವ, ನೈವಿಧ್ಯ ಸಮರ್ಪಣೆ ನಂತರ ರಾತ್ರಿ ೧೦ ಘಂಟೆಗೆ ಅಪ್ಪಾಜಿ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ದಿ:೧ ಶನಿವಾರದಂದು ಬಾಶೀದೀಪೋತ್ಸವ, ಕಾಯಿಕರ್ಪೂರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣಗೊಳ್ಳಲಿವೆ. ಅದೇ ದಿನ ಬೆಳಿಗ್ಗೆ ಭಾರ ಎತ್ತುವ ಸ್ಪರ್ಧೆ, ಇದರಲ್ಲಿ ತೆಕ್ಕೆಬಡಿದು ಚೀಲ ಎತ್ತುವ ಹಾಗೂ ಗುಂಡು ಎತ್ತುವ ಜೊತೆಯಲ್ಲಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ಜರುಗುವವು. ಸಂಜೆ ಬೃಹತ್ ಜಂಗೀ ಕುಸ್ತಿಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಕಮೀಟಿ ವತಿಯಿಂದ ನಗದು ಬಹುಮಾನಗಳನ್ನು ನೀಡಲಾಗುವುದು. ಇದೇದಿನ ರಾತ್ರಿ ಭಕ್ತಾದಿಗಳಿಂದ ದೀಪಾಲಂಕಾರ ಸೇವೆ ನಡೆಯಲಿದೆ. ಜಾತ್ರೆಯ ಅಂಗವಾಗಿ ಸತತ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.
ಮುಳಸಾವಳಗಿ ಗ್ರಾಮಕ್ಕೆ ದೇವರಹಿಪ್ಪರಗಿ ಇಂಡಿ ಕಡೆಯಿಂದ ವಾಹನಗಳ ಅನುಕೂಲವಿದ್ದು, ಗ್ರಾಮದ ಆಟೋ ಸೇರಿದಂತೆ ಎಲ್ಲ ವಾಹನ ಚಾಲಕರು ಜಾತ್ರಾ ಸಮಯದಲ್ಲಿ ಉಚಿತ ಸೇವೆ ಒದಗಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುನೀತರಾಗಬೇಕೆಂದು ಜಾತ್ರಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

