ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ ೧೩ ಗ್ರಾಮಗಳಲ್ಲಿ ನವೆಂಬರ್ ೮ ರಂದು ಬೆಳಿಗ್ಗೆ ೧೧ ಗಂಟೆಗೆ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ನವೆಂಬರ ೮ರ ಬೆಳಿಗ್ಗೆ ೧೧ ಗಂಟೆಗೆ ವಿಜಯಪುರ ಉಪ ವಿಭಾಗಾಧಿಕಾರಿ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ, ಇಂಡಿ ಉಪ ವಿಭಾಗಾಧಿಕಾರಿ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ವಿಜಯಪುರ ಗ್ರೇಡ್ ೨ ತಹಶೀಲ್ದಾರ ಅವರು ವಿಜಯಪುರದ ವಾರ್ಡ್ ನಂಬರ್ ೩ರ ಓಂ ಗಣಪತಿ ದೇವಸ್ಥಾನ, ಸಿಂಧೆ ಕಾಲೋನಿ ಭಾವಸಾರ ನಗರದಲ್ಲಿ, ತಿಕೋಟಾ ಗ್ರೇಡ್ ೨ ತಹಶೀಲ್ದಾರ ಅವರು ಹರನಾಳದ ಶ್ರೀ ವಿಠ್ಠಲ ಮಂದಿರದಲ್ಲಿ, ಬಬಲೇಶ್ವರ ಗ್ರೇಡ್ ೨ ತಹಶೀಲ್ದಾರ ಅವರು ಧನ್ಯಾಳದ ಮಳೇಸ್ವಾಮಿ ದೇವಸ್ಥಾನದಲ್ಲಿ, ಬಸವನ ಬಾಗೇವಾಡಿ ಗ್ರೇಡ್ ೨ ತಹಶೀಲ್ದಾರ ಅವರು ನರಸಲಗಿಯ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಕೋಲಾರ ತಹಶೀಲ್ದಾರ ಅವರು ಚಿಕ್ಕ ಗರಸಂಗಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ, ಮುದ್ದೇಬಿಹಾಳ ಗ್ರೇಡ್ ೨ ತಹಶೀಲ್ದಾರ ಅವರು ನಾಗರಾಳದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ, ತಾಳಿಕೋಟೆಯ ತಹಶೀಲ್ದಾರ ಅವರು ತಾಳಿಕೋಟಿ ಪಟ್ಟಣದ ವಾರ್ಡ್ ನಂಬರ್ ೨೩ರ ಸಮುದಾಯ ಭವನ ವಡ್ಡರ ಓಣಿಯಲ್ಲಿ, ಚಡಚಣದ ಗ್ರೇಡ್ ೨ ತಹಶೀಲ್ದಾರ ಅವರು ಮರಗೂರನ ಶ್ರೀ ಹನುಮಾನ್ ದೇವಸ್ಥಾನದಲ್ಲಿ, ಸಿಂದಗಿ ಗ್ರೇಡ್ ೨ ತಹಶೀಲ್ದಾರ ಅವರು ಚಿಕ್ಕ ಸಿಂದಗಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ದೇವರಹಿಪ್ಪರಗಿ ಗ್ರೇಡ್ ೨ ತಹಶೀಲ್ದಾರ ಅವರು ನಿವಾಳಖೇಡದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ಆಲಮೇಲ ತಹಶೀಲ್ದಾರ ಅವರು ತಾವರ ಖೇಡದ ಸರಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಪಿಂಚಣಿ ಫಲಾನುಭವಿಗಳಿಗೆ ಎನ್.ಪಿ.ಸಿ.ಐ. ಮ್ಯಾಪಿಂಗ್ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೇ ಮಾಡಿಸುವಂತೆಯೂ ಹಾಗೂ ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲಾ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

