ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ೨೦೨೩-೨೪ ಹಾಗೂ ೨೪-೨೫ನೇ ಸಾಲಿನ ಕಾಲೇಜು ಅಭಿವೃದ್ಧಿ ಸಮಿತಿ ನಿಧಿಯಿಂದ ನಿರ್ಮಾಣ ಮಾಡಲಾದ ಸಭಾಭವನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ೧೫೦ ವರ್ಷಗಳ ಇತಿಹಾಸ ಹೊಂದಿರುವ ಈ ಕಾಲೇಜಿನಲ್ಲಿ ೬ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಕಲಿಯುವ ಮಕ್ಕಳ ಶಿಕ್ಷಣಕ್ಕೆ ಅವಶ್ಯಕತೆಯಿರುವ ಕೊಠಡಿಗಳು, ಲ್ಯಾಬ್, ಶೌಚಾಲಯ ಮತ್ತಿತರೆ ಮೂಲಭೂತ ಸೌಕರ್ಯವನ್ನು ಹಂತ ಹಂತವಾಗಿ ಕಲ್ಪಿಸಲಾಗಿದೆ. ಮುಂದೆ ಕೂಡ ಈ ಕಾಲೇಜು ಸೇರಿದಂತೆ ನಗರದಲ್ಲಿರುವ ಪ್ರತಿಯೊಂದು ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ೨೦೨೨-೨೩ನೇ ಸಾಲಿನ ಜಿಲ್ಲಾ ಪಂಚಾಯಿತಿಯ ವಿವೇಕ ಶಾಲಾ ಕೊಠಡಿ ಯೋಜನೆಯಡಿ ಮಂಜೂರಿಸಲಾದ ರೂ.೧.೨೫ ಕೋಟಿ ಅನುದಾನದಲ್ಲಿ ಹೊಸ ೫ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಾಲಕಿಯರ ಪದವಿಪೂರ್ವ ಕಾಲೇಜು ಸುಧಾರಣಾ ಸಮಿತಿ ಸದಸ್ಯರು, ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

