ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುರುವಾರ ಸೈಬರ್ ಕ್ರೈಂ ವಂಚನೆ ಆಧಾರಿತ ’ಢಣ ಢಣ ಕಾಂಚಾಣ’ ವೆಬ್ ಸೀರಿಸ್‌ನ ಪೋಸ್ಟರ್‌ನ್ನು ಪ್ರಶಾಂತ ಕದ್ದರಕಿ ಬಿಡುಗಡೆಗೊಳಿಸಿದರು.
ಈ ವೇಳೆ ನಿರ್ಮಾಪಕ ಗುರುರಾಜ ಮಠ ಮಾತನಾಡಿ, ನಿರ್ದೇಶಕ ರಘುಚಂದ್ರ ಬಿರಾದಾರ ಸೈಬರ್ ವಂಚನೆಯ ಕಥಾ ಹಂದರವನ್ನು ಹೆಣೆದು ಈ ವೆಬ್ ಸೀರಿಸ್ ರಚಿಸಿದ್ದಾರೆ. ಬಹುತೇಕ ವಿಜಯಪುರ ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಶೂಟಿಂಗ್ ಮಾಡಲಾಗಿದ್ದು. ಇಡೀ ವೆಬ್ ಸೀರಿಸ್ ಉತ್ತರ ಕರ್ನಾಟಕ ಭಾಷೆಯನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ಕಲಾವಿದರ ನಟನೆಯನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿಯೇ ನೋಡಬಹುದಾಗಿದೆ. ಶಿವು ಕುಂಬಾರ, ಶೃತಿ ಪೂಜಾರ, ಸಂತೋಷ ಉಪ್ಪಿನ, ಯಶವಂತ ಕೊಚಬಾಳ, ಪ್ರವೀಣ ಬಿರಾದಾರ ಈ ೬ಜನ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ೭ ಎಪಿಸೋಡ್‌ಗಳು ಓಟಿಟಿಯ ಮೂಲಕ ತೆರೆಗೆ ಬರಲಿದೆ ಎಂದರು.
ಚಲನಚಿತ್ರ ನಟ ಸಂತೋಷ ಉಪ್ಪಿನ ಮಾತನಾಡಿ, ನಿರ್ದೇಶಕ ರಘುಚಂದ್ರ ಬಿರಾದಾರರವರ ಉತ್ತರ ಕರ್ನಾಟಕದ ಶೈಲಿಯ ನಿರ್ದೇಶನವು ವಿಭಿನ್ನವಾಗಿ ಮೂಡಿಬಂದಿದೆ. ಈ ಭಾಗದ ಕಲಾವಿದರಿಗೆ ಈ ವೆಬ್ ಸಿರೀಸ್ ಮುಖ್ಯ ವೇದಿಕೆಯಾಗಲಿದೆ ಎಂದರು.
ಈ ವೇಳೆ ನಿರ್ಮಾಪಕ ಭೋಜರಾಜ ದೇಸಾಯಿ, ನಟ ಶಿವು ಕುಂಬಾರ, ನಟ ಸಂತೋಷ ಉಪ್ಪಿನ, ರಂಗಾಯಣ ನಾಗರಾಜ ಹರನೂರ ಇದ್ದರು.

