ಗ್ರಂಥಾಲಯ ಸ್ಥಳ ವೀಕ್ಷಣೆ ಮಾಡಿದ ಡಿಸಿ ಟಿ.ಭೂಬಾಲನ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವನ ಬಾಗೇವಾಡಿಯಲ್ಲಿ ಹೊಸದಾಗಿ ಗ್ರಂಥಾಲಯ ನಿರ್ಮಾಣವಾಗುವ ಕುರಿತು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಗ್ರಂಥಾಲಯ ಕಟ್ಟಡದಲ್ಲಿ ಸಾಕಷ್ಟು ಗಾಳಿ ಬೆಳಕು ಬರುವಂತೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ಅಗತ್ಯ ಮೂಲಭೂತ ಸೌಕರ್ಯಕ್ಕೆ ಆಧ್ಯತೆ ನೀಡಿ ನಿರ್ಮಾಣ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ನಗರದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದAತೆ ಒತ್ತುವರಿ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಬಾಕಿ ಕಡತಗಳ ಪರಿಶೀಲನೆ, ಆಧಾರ ನೋಂದಣಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆ ಪ್ರಗತಿ ಮಾಹಿತಿ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕಾಧಿಕಾರಿ ರಿಷಿ ಆನಂದ, ಬಸವನ ಬಾಗೇವಾಡಿ ತಹಶೀಲ್ದಾರ್ ವಾಯ್.ಎಸ್. ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

